ಮಡಿಕೇರಿ: ಯಾರ ಮನೆಯವರೇ ಆಗಿರಲಿ ಹಿರಿಯ ನಾಗರೀಕರು,ಅನಾರೋಗ್ಯ ಪೀಡಿತರನ್ನು ನೋಡಿಕೊಳ್ಳಲು ಕೇರ್ ಟೇಕರ್ ಗಳನ್ನು ಇಟ್ಟುಕೊಳ್ಳುವಾಗ ಆತನ/ಆತಳ ಪೂರ್ವಾಪರ ವಿಚಾರಿಸಿ ಹತ್ತಿರದ ಠಾಣೆಗೆ ಅವರ ಬಗ್ಗೆ ಮಾಹಿತಿ ನೀಡುವುದು ಒಳಿತು.
ಈಗ ಯಾರನ್ನೂ ನಂಬುವಂತಿಲ್ಲ.ಕೇರ್ ಟೇಕರ್ ನೆಪದಲ್ಲಿ ಬರುತ್ತಾರೆ.ಸಮಯ ಸಂದರ್ಭ ನೋಡಿ ಹಣ ಆಭರಣ ದೋಚುತ್ತಾರೆ.ಅದಕ್ಕಾಗಿ ಬಹಳ ಎಚ್ಚರಿಕೆಯಿಂದ ಇರಬೇಕಿದೆ ಇಂತಹ ಒಂದು ಉದಾಹರಣೆ ಮಡಿಕೇರಿಯಲ್ಲಿ ನಡೆದಿದ್ದು ಹೋಂ ನರ್ಸ್ ಕಂಬಿ ಎಣಿಸುತ್ತಿದ್ದಾನೆ.
ವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕೆ ಸೇರಿಕೊಂಡು ಚಿನ್ನಾಭರಣ ಹಾಗೂ ಹಣ ದೋಚಿದ್ದ ಕತರ್ನಾಕ್ ಕಳ್ಳನನ್ನು ಮಡಿಕೇರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಮಣ್ಣೂರು ಗ್ರಾಮದ ಭದ್ರಪ್ಪ ಬಸಪ್ಪ ಹಡಪದ (೨೭) ಬಂಧಿತ ಆರೋಪಿ.
ಬಂಧಿತ ಆರೋಪಿಯಿಂದ ೫,೦೯,೦೦೦ ರೂ. ಹಣ, ೧೩೭ ಗ್ರಾಂ ಚಿನ್ನಾಭಾರಣಗಳು ಹಾಗೂ ೧ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫೀಲ್ಡ್ ಮಾರ್ಶಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಿಂಭಾಗದ ಬಡಾವಣೆಯ ನಿವಾಸಿ ಪಾರ್ಥಸಾರಥಿ ಎಂಬುವವರ ಅಣ್ಣ ವಯೋವೃದ್ಧರಾಗಿದ್ದು, ಅವರನ್ನು ನೋಡಿಕೊಳ್ಳಲು ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕಾಗಿ ಕೊಪ್ಪಳ ಜಿಲ್ಲೆ ಮೂಲದವನೆಂದು ಹೇಳಿಕೊಂಡು ವ್ಯಕ್ತಿಯೊಬ್ಬ ನೇಮಕಗೊಂಡಿದ್ದ.
ಈತ ಇದೇ ಫೆ.೨೮ ರಂದು ಮನೆಯಲ್ಲಿಟ್ಟಿದ್ದ ಸುಮಾರು ೮೦ ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ೫,೫೦,೦೦೦ ಹಣವನ್ನು ಕಳವು ಮಾಡಿದ್ದಾನೆ ಎಂದು ಪಾರ್ಥಸಾರಥಿ ಮನೆಯವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹಿರಿಯ ಅಧಿಕಾರಿಗಳು ಹಾಗೂ ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿ, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆ ಕೈಗೊಂಡಿದ್ದರು.
ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಮಾಹಿತಿ ಸಂಗ್ರಹಿಸಿದಾಗ ಆರೋಪಿ ಭದ್ರಪ್ಪ ಬಸಪ್ಪ ಹಡಪದ ಕಳವು ಮಾಡಿದ್ದೆಂದು ತಿಳಿದು ಬಂತು.
ಈತ ಮಹಾಂತೇಶ ಪೂಜಾರ ಎಂಬುವವರ ಆಧಾರ್ ಕಾರ್ಡ್ ಪ್ರತಿಯನ್ನು ಬಳಸಿ ಹೋಂ ನರ್ಸಿಂಗ್ ಕೆಲಸಕ್ಕೆ ಸೇರಿರುವುದು ಹಾಗೂ ೨೦೨೫ ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಕೆ.ಟಿ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಗೊತ್ತಾಗಿದೆ.
ಡಿವೈಎಸ್ಪಿ ಪಿ.ಎ. ಸೂರಜ್, ಮಡಿಕೇರಿ ನಗರ ವೃತ್ತದ ಸಿಪಿಐ ಪಿ.ಕೆ. ರಾಜು, ಬೆರಳು ಮುದ್ರೆ ಘಟಕದ ಪಿಐ ರಾಮಕೃಷ್ಣ, ಮಡಿಕೇರಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಎಸ್.ಎಸ್. ಅನ್ನಪೂರ್ಣ, ಎಎಸ್ಐ ರಾಮಪ್ಪ, ಸಿಬ್ಬಂದಿಗಳಾದ ಪ್ರಭಾಕರ್, ಗಿರೀಶ್, ಕಿರಣ್, ಕೃಷ್ಣಮೂರ್ತಿ, ಸುಧೀರ್, ಮುನೀರ್, ರಂಜಿತ್, ಪ್ರದೀಪ್, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಶರತ್ ರೈ, ಫಾರೆನ್ಸಿಕ್ ವಿಭಾಗದ ಜಯಕುಮಾರ್, ಸಂತೋಷ, ಡಿಸಿಆರ್ಬಿ ವಿಭಾಗದ ಪ್ರವೀಣ್ ಹಾಗೂ ನಿರಂಜನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
