ಮೈಸೂರು: ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 12,764 ಪ್ರಕರಣ ಇತ್ಯರ್ಥ ಪಡಿಸಲಾಗಿದೆ.
ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,31,411 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 65,475 ಸಿವಿಲ್ ಪ್ರಕರಣಗಳು ಹಾಗೂ 65,936 ಕ್ರಿಮಿನಲ್ ಪ್ರಕರಣಗಳಿದ್ದು, ಪ್ರಸ್ತುತ ಸದರಿ ಪ್ರಕರಣಗಳಲ್ಲಿ 44,746 ಪ್ರಕರಣಗಳು ರಾಜಿಯಾಗಬಹುದಾದ ಪ್ರಕರಣಗಳು.
ಅವುಗಳ ಪೈಕಿ 22,064 ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು. ರಾಜಿ ಸಂಧಾನಕ್ಕಾಗಿ ತೆಗೆದುಕೊಂಡ ಪ್ರಕರಣಗಳಲ್ಲಿ (ನ್ಯಾಯಾಲಯದಲ್ಲಿ ಬಾಕಿ ಇರುವ) 12,764 ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗಿದೆ.
ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ ಮೈಸೂರು ನಗರ ಹಾಗೂ ಮೈಸೂರು ತಾಲ್ಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 40 ದಂಪತಿಗಳು ತಮ್ಮ ಮಧ್ಯದ ವಾಜ್ಯಗಳನ್ನು ಬಗೆಹರಿಸಿಕೊಂಡು ಒಂದಾಗಿದ್ದಾರೆ.
ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟಾರೆಯಾಗಿ 12,764 ನ್ಯಾಯಾಲಯದಲ್ಲಿ ಬಾಕಿಯಿದ್ದ ಪ್ರಕರಣಗಳು ತೀರ್ಮಾನವಾಗಿದೆ.
ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಸಂಧಾನ ಮೂಲಕ ಒಟ್ಟು 74,66,67,115 ರೂ ಮೊತ್ತಗಳು ಇತ್ಯರ್ಥವಾಗಲಿವೆ.ಈ ಯಶಸ್ಸಿಗೆ ಸಹಕರಿಸಿದ ವಕೀಲರ ಸಂಘದ ಪದಾಧಿಕಾರಿಗಳು, ಎಲ್ಲಾ ವಕೀಲರುಗಳು ಹಾಗೂ ಕಕ್ಷಿಗಾರರು, ಪೊಲೀಸ್ ಇಲಾಖೆಯನ್ನೊಳಗೊಂಡಂತೆ ಇನ್ನಿತರೆ ಎಲ್ಲಾ ಇಲಾಖೆಗಳು ಹಾಗೂ ಮಾಧ್ಯಮದವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ತಿ ಉಷಾರಾಣಿ ರವರು ಕೃತಜ್ಞತೆಯನ್ನು ಸಲ್ಲಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಅಮರ್ನಾಥ್ ಕೆ.ಕೆ.,ಮೈಸೂರು ವಕೀಲರ ಸಂಘದ ಅಧ್ಯಕ್ಷ. ಎಸ್.ಲೋಕೇಶ್ ಮತ್ತು ಕಾರ್ಯದರ್ಶಿ.ಎ.ಜಿ.ಸುಧೀರ್ ಹಾಗೂ ಮೈಸೂರು ನಗರದ ಎಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು ಹಾಜರಿದ್ದರು.
