ಭುವನೇಶ್ವರ್: ಒಡಿಶಾದ ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಹತ್ತು ರೋಗಿಗಳು ಸಜೀವ ದಹನವಾಗಿದ್ದಾರೆ.
ಈ ಬೆಂಕಿ ಅವಘಡದಲ್ಲಿ 12 ಮಂದಿ ಆಸ್ಪತ್ರೆ ಸಿಬ್ಬಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.
ಸೋಮವಾರ ಎಲ್ಲ ರೋಗಿಗಳು ಅವರನ್ನು ನೋಡಿಕೊಳ್ಳುತ್ತಿದ್ದವರು ನಿದ್ರೆಗೆ ಜಾರಿದ್ದರು.
ಮುಂಜಾನೆ 2.30 ರಿಂದ 3 ಗಂಟೆಯಲ್ಲಿ ಐಸಿಯುನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ.
ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ಮಂದಿ ರೋಗಿಗಳು ಮೃತಪಟ್ಟಿದ್ದಾರೆ.ಗಾಯಾಳುಗಳಿಗೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಹಲವಾರು ಅಗ್ನಿಶಾಮಕ ವಾಹನಗಳು ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವು
ಎಸ್ಸಿಬಿ ಆಸ್ಪತ್ರೆ ಒಡಿಶಾದಲ್ಲಿ ಸರ್ಕಾರಿ ಸ್ವಾಮ್ಯದ ಪ್ರಮುಖ ವೈದ್ಯಕೀಯ ಸೌಲಭ್ಯವುಳ್ಳ ಆಸಗಪತ್ರೆಯಾಗಿದೆ.
ಘಟನೆ ನಡೆದ ಸ್ವಲ್ಪ ಸಮಯದ ನಂತರ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಆರೋಗ್ಯ ಸಚಿವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು, ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ರೋಗಿಗಳನ್ನು ಸಹ ಭೇಟಿ ಮಾಡಿ ದೈರ್ಯ ತುಂಬಿದರು.
ಬಳಿಕ ಮಾತನಾಡಿ, ಒಟ್ಟು 23 ರೋಗಿಗಳನ್ನು ಇತರ ವಿಭಾಗಗಳಿಗೆ ಸ್ಥಳಾಂತರಿಸಲಾಗಿದೆ. ಇತರ ಐಸಿಯುಗಳು ಮತ್ತು ವಾರ್ಡ್ಗಳಿಗೆ ಸ್ಥಳಾಂತರಿಸುವಾಗ ಏಳು ಗಂಭೀರ ರೋಗಿಗಳು ಸಾವನ್ನಪ್ಪಿದರು, ಆದರೆ ಇನ್ನೂ ಮೂವರು ರೋಗಿಗಳು ನಂತರ ಸಾವನ್ನಪ್ಪಿದರು. ಗಾಯಗೊಂಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ತಿಳಿಸಿದರು.
ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿಲಾಗಿದೆ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಮಾಝಿ ತಿಳಿಸಿದರು.
