ಯಾದಗಿರಿ: ಊರಿನಲ್ಲಿ ಬಹಿಷ್ಕಾರ ಹಾಕಿದ್ದರಿಂದ ಮನ ನೊಂದು ಮಹಿಳೆಯೊಬ್ಬಳು ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಡಗೇರಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯಾದಗಿರಿಯ ಗಿರಿನಗರದ ನಿವಾಸಿ ಕಮಲಮ್ಮ (೪೨) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಯಾದಗಿರಿಯಲ್ಲಿ ವಾಸವಾಗಿದ್ದ ಸಿಳ್ಳೆಕ್ಯಾತ ಸಮುದಾಯದ ಕಮಲಮ್ಮಳ ಮಗ ಎರ್ರಿಸ್ವಾಮಿ ಯುವತಿ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಇಡೀ ಕುಟುಂಬಕ್ಕೆ ಅದೇ ಸಮುದಾಯದ ಮುಖಂಡರು ಬಹಿಷ್ಕಾರ ಹಾಕಿದ್ದಾರೆ.
ಹಾಗಾಗಿ ಸಂಬಂಧಿಕರ ಊರಾದ ಜೋಳದಡಗಿಗೆ ಬಂದಿದ್ದರು.
ಅವರು ಮೀನು ಹಿಡಿದು ಮಾರಾಟ ಮಾಡಿ ಜೀವನ ಸಾಗಿಸಬೇಕು ಎಂದು ಕೊಂಡಿದ್ದರು, ಆದರೆ ಅದಕ್ಕೂ ಊರವರು ಬಹಿಷ್ಕಾರ ಹಾಕಿದ್ದರು.
ಇದರಿಂದ ಮನನೊಂದ ಮಹಿಳೆ ಜೀವನ ಹೇಗೆ ನಡೆಸಬೇಕು ಎಂಬ ಚಿಂತೆಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪತಿ ಯಲ್ಲಪ್ಪ ಹಾಗೂ ಪುತ್ರ ಎರ್ರಿಸ್ವಾಮಿ ದೂರಿದ್ದಾರೆ.
ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿ ಸ್ಥಳೀಯರ ಸಹಾಯದಿಂದ ಶವ ಹೊರ ತೆಗೆದು ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ತನಿಖೆ ನಡೆಯುತ್ತಿದೆ.
