ಸುಂಟಿಕೊಪ್ಪ: ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಮಿಳುನಾಡು ಮೂಲದ ವಿದ್ಯಾರ್ಥಿ ಮೃತಪಟ್ಟ ಘಟನೆ ಹೇರೂರುವಿನಲ್ಲಿ ನಡೆದಿದೆ.
ತಮಿಳುನಾಡು ರಾಜ್ಯದ ನಿವಾಸಿ ಪ್ರಸ್ತುತ ಬೆಂಗಳೂರು ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸುದರ್ಶನ್ (22) ಮೃತ ವಿದ್ಯಾರ್ಥಿ.
ಕಾಲೇಜಿನಿಂದ ತಂಡ ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬಂದಿತ್ತು,ವಿದ್ಯಾರ್ಥಿಗಳು ಹೇರೂರಿನಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನ ವೀಕ್ಷಣೆಗೆ ತೆರಳಿದ್ದರು.
ಆಗ ಸುದರ್ಶನ್ ನೀರಿಗೆ ಇಳಿದಿದ್ದಾನೆ. ನಂತರ ಮೇಲಕ್ಕೆ ಬರಲಾಗದೆ ನೀರು ಪಾಲಾಗಿದ್ದಾನೆ.
ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸ್ಥಳೀಯ ಮುಳುಗು ತಜ್ಞರ ನೆರವಿನಲ್ಲಿ ಮೃತದೇಹವನ್ನು ಹೊರಕ್ಕೆ ತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
