ನಂಜನಗೂಡು: ವಿಶ್ವ ಮಹಿಳಾ ದಿನಾಚರಣೆಯ ಸುಸಂದರ್ಭದಲ್ಲಿ ನಂಜನಗೂಡು ಬಾಲಕರ ಸ. ಪ ಪೂ ಕಾಲೇಜು ಪ್ರಾಂಶುಪಾಲರಾದ
ಸಿ.ಆರ್.ದಿನೇಶ್ ಅವರು ಎಲ್ಲಾ ಮಹಿಳಾ ಉಪನ್ಯಾಸಕರಿಗೆ ಪ್ರೀತಿಪೂರ್ವಕ ಪತ್ರ ಬರೆದಿದ್ದಾರೆ.
ಕಾಲೇಜುಗಳ ಎಲ್ಲಾ ಸಹೋದರಿ ಸಮಾನರಾದ ಗೌರವಾನ್ವಿತ ಮಹಿಳಾ ಉಪನ್ಯಾಸಕರಿಗೆ…
ಶಿಕ್ಷಣ ಎಂಬ ಪವಿತ್ರ ಕ್ಷೇತ್ರದಲ್ಲಿ ನೀವು ಸಲ್ಲಿಸುತ್ತಿರುವ ಸೇವೆ ಕೇವಲ ವೃತ್ತಿಯಲ್ಲ; ಅದು ಸಮಾಜ ನಿರ್ಮಾಣದ ಮಹತ್ತರ ಹೊಣೆಗಾರಿಕೆಯಾಗಿದೆ. ನಿಮ್ಮ ಜ್ಞಾನ, ಪರಿಶ್ರಮ ಮತ್ತು ಸಮರ್ಪಣೆಯಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದ್ದೀರಿ.
ಮಹಿಳಾ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕೇವಲ ಪಾಠ ಬೋಧಿಸುವವರಲ್ಲ, ಅವರು ಜೀವನದ ಮೌಲ್ಯಗಳು, ಶಿಸ್ತು, ಸಂಸ್ಕಾರ ಮತ್ತು ಮಾನವೀಯತೆಗಳನ್ನು ಬಿತ್ತುವ ಮಾರ್ಗದರ್ಶಕರು.
ನಿಮ್ಮ ಸಹನೆ, ಕಾಳಜಿ ಮತ್ತು ತ್ಯಾಗಭಾವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜ್ಞಾನ ದೀಪವನ್ನು ಬೆಳಗಿಸುತ್ತಿದ್ದು, ಸಮಾಜದ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ.
ಇಂದಿನ ಮಹಿಳೆಯರು ಮನೆಯಲ್ಲಿ ಪತಿ ಮಕ್ಕಳ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಾ ಕುಟುಂಬ, ಸಮಾಜ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ಸಮಾನವಾಗಿ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಾ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ.
ನಿಮ್ಮಂತಹ ಮಹಿಳಾ ಉಪನ್ಯಾಸಕರಿಂದ ಕಾಲೇಜಿನ ಶೈಕ್ಷಣಿಕ ವಾತಾವರಣ ಇನ್ನಷ್ಟು ಸಮೃದ್ಧವಾಗಿದ್ದು, ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ.
ಸಿ.ಆರ್.ದಿನೇಶ್,
ಪ್ರಾಂಶುಪಾಲರು

