ಬೆಂಗಳೂರು: ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾ ದೊಡ್ಡ ಸಮಸ್ಯೆಯಾಗಿದ್ದು,ಸರ್ಕಾರ ಕ್ರಮ ಜರುಗಿಸಬೇಕೆಂದು ಆಪ್ ಆಗ್ರಹಿಸಿದೆ.
ಸಾವಿರಾರು ಖಾಸಗಿ ಬೋರ್ವೆಲ್ಗಳು ಮತ್ತು ಟ್ಯಾಂಕರ್ಗಳ ಮೂಲಕ ನೀರನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುವ ಬೃಹತ್ ಜಾಲವು ಬೇಸಿಗೆ ಸಂದರ್ಭದಲ್ಲಿ ಮತ್ತೆ ಗರಿಗೆದರಿದೆ.
ಕೆಲವೊಮ್ಮೆ ಒಂದು ಟ್ಯಾಂಕರ್ ನೀರಿಗೆ 3000 ಅಥವಾ ಅದಕ್ಕಿಂತ ಹೆಚ್ಚು ವಸೂಲಿ ಮಾಡಿರುವ ಉದಾಹರಣೆಗಳು ಇವೆ ಎಂದು ಆಪ್ ಗಮನ ಸೆಳೆದಿದೆ.
ಈ ಸಮಸ್ಯೆಯನ್ನು ತಡೆಯಲು ಸರ್ಕಾರ ಕೂಡಲೇ ಅಕ್ರಮ ಖಾಸಗಿ ಟ್ಯಾಂಕರ್ ಗಳನ್ನು ವಶಪಡಿಸಿಕೊಂಡು ಅವುಗಳ ಮೂಲಕ ಉಚಿತವಾಗಿ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಅಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಎಲ್ಲಾ ಟ್ಯಾಂಕರ್ಗಳಿಗೆ ಕಡ್ಡಾಯ ನೋಂದಣಿ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ಲೈಸೆನ್ಸ್ ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿದರು.
ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಮೂಲಕ ನೀರು ಎಲ್ಲಿ ತೆಗೆದುಕೊಳ್ಳುತ್ತಾರೆ ಮತ್ತು ಎಲ್ಲಿ ನೀಡುತ್ತಾರೆ ಎಂಬ ಬಗ್ಗೆ ನಿಗಾ ವಹಿಸಬೇಕು.
ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುವ ಟ್ಯಾಂಕರ್ಗಳಿಗೆ ಭಾರೀ ದಂಡ ಮತ್ತು ವಾಹನ ಜಪ್ತಿ ಮಾಡಬೇಕು ಎಂದು ಡಾ. ಸತೀಶ್ ಕುಮಾರ್ ಸಲಹೆ ನೀಡಿದರು.
ನಗರದಲ್ಲಿ ಇರುವ ಎಲ್ಲಾ ಖಾಸಗಿ ಬೋರ್ವೆಲ್ಗಳ ಕುರಿತು ಸರ್ವೇ ಮಾಡಬೇಕು,ಅನುಮತಿ ಇಲ್ಲದೆ ಬೋರ್ವೆಲ್ಗಳಿಂದ ನೀರು ತೆಗೆದು ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು,ಬೋರ್ವೆಲ್ಗೆ ಡಿಜಿಟಲ್ ಮೀಟರ್ ಹಾಕಿ ಎಷ್ಟು ನೀರು ತೆಗೆದುಕೊಳ್ಳುತ್ತಾರೆ ಎಂದು ದಾಖಲಿಸಬೇಕು.
ಬೆಂಗಳೂರು ಜಲ ಮಂಡಳಿ ಆರಂಭಿಸಿರುವ ಸಂಚಾರಿ ಕಾವೇರಿ ಯೋಜನೆ ಮೂಲಕ ಸರ್ಕಾರದ ಟ್ಯಾಂಕರ್ಗಳಿಂದ ಕಡಿಮೆ ದರದಲ್ಲಿ ನೀರು ನೀಡಲಾಗುತ್ತಿದೆ. ಈ ವ್ಯವಸ್ಥೆಯನ್ನು ನಗರದೆಲ್ಲೆಡೆ ವಿಸ್ತರಿಸಿದರೆ ಖಾಸಗಿ ಟ್ಯಾಂಕರ್ ಮಾಫಿಯಾದ ಪ್ರಭಾವ ಕಡಿಮೆಯಾಗುತ್ತದೆ ಎಂದು ಸತೀಶ್ ಕುಮಾರ್ ಅಗ್ರಹಿಸಿದರು.
ಜನರು ಅಕ್ರಮ ಟ್ಯಾಂಕರ್ಗಳ ಬಗ್ಗೆ ದೂರು ನೀಡುವ ಸಹಾಯವಾಣಿ ನಂಬರ್ ಗಳು ಹಾಗೂ ಮೊಬೈಲ್ ಆಪ್ ಗಳನ್ನು ಕೂಡಲೆ ಸ್ಥಾಪಿಸಬೇಕು,ಸ್ಥಳೀಯ ನಿವಾಸಿ ಸಂಘಗಳಿಗೆ ನೀರಿನ ಬಳಕೆಯನ್ನು ನಿಯಂತ್ರಿಸಲು ಅಧಿಕಾರ ನೀಡಬೇಕು ಎಂದು ಸತೀಶ್ ಕುಮಾರ್ ಒತ್ತಾಯಿಸಿದರು.
