ಮೈಸೂರು: ಮೈಸೂರು ಸಿಲ್ಕ್ ನೂಲು ತೆಗೆಯುವ ಟಿ. ನರಸೀಪುರದ ಕಾರ್ಖಾನೆಯ ಆವರಣದೊಳಗೆ ಕ್ರೀಡಾಂಗಣ ನಿರ್ಮಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ 1912 ರಲ್ಲಿ ಸುಮಾರು 13 ಎಕರೆ ವಿಶಾಲವಾದ ಜಾಗದಲ್ಲಿ ಮೈಸೂರು ಸಿಲ್ಕ್ ಫ್ಯಾಕ್ಟರಿ ಯನ್ನು ಸ್ಥಾಪಿಸಿದರು. ಈ ಕಾರ್ಖಾನೆ ಒಳಗೆ ಸುಮಾರು 5 ಎಕರೆ ಜಾಗದಲ್ಲಿ 60-70 ವರ್ಷಗಳ ಹಳೆಯದಾದ ಸುಮಾರು 550 ಬೃಹತ್ ಮರಗಳಿವೆ.
ರಾಮನಗರ, ಚನ್ನಪಟ್ಟಣ ಹಾಗೂ ಇನ್ನಿತರ ಸ್ಥಳಗಳಿಂದ ರೇಷ್ಮೆ ಗೂಡನ್ನು ತಂದು ಇಲ್ಲಿ ರೇಷ್ಮೆ ಹುಳುಗಳನ್ನು ಬೇಯಿಸುತ್ತಾರೆ. ಬೇಯಿಸಿದಾಗ ಇದರಿಂದ ಬಹಳ ಕೆಟ್ಟ ವಾಸನೆ ಬರುತ್ತದೆ. ಈ ವಾಸನೆ ಈಗ ಇಲ್ಲಿ ನಿಯಂತ್ರಣವಾಗಿರುವುದೇ ಇಲ್ಲಿರುವ ದಟ್ಟ ಮರಗಳಿಂದ. ಇಲ್ಲವಾದರೆ ಊರು ತುಂಬಾ ವಾಸನೆ ಗಬ್ಬೇರುತ್ತದೆ.
ರೇಷ್ಮೆ ಗೂಡಿನ ಹುಳಗಳನ್ನು ಸುಟ್ಟಾಗಲೇ ,ರೇಷ್ಮೆ ನೂಲು ಬರುತ್ತದೆ, ಈ 5 ಎಕರೆಯಲ್ಲಿರುವ ಮರಗಳು ವಾಸನೆಯನ್ನು ಈಗಲೂ ತಡೆಗಟ್ಟುತ್ತಿದೆ. ಈ 5 ಎಕರೆ ಜಾಗವನ್ನು ಸರ್ಕಾರ ಕ್ರೀಡಾಂಗಣ ನಿರ್ಮಿಸಲು ನೀಡಿದರೆ, 550 ಮರಗಳನ್ನು ಕಡಿದರೆ, ಪರಿಸರ ಹಾಳಾಗುತ್ತದೆ. ಜೊತೆಗೆ ವಾಸನೆ ಊರೆಲ್ಲ ಹರಡುತ್ತದೆ. ಜನರು ಊರಿನಲ್ಲಿ ವಾಸನೆಯಿಂದ ಬದುಕುವುದೇ ಕಷ್ಟಕರವಾಗುತ್ತದೆ. ಕ್ರೀಡಾಪಟುಗಳು ಇಲ್ಲಿ ಸುಡುವ ರೇಷ್ಮೆ ಗೂಡಿನ ವಾಸನೆಯಿಂದ, ಅನಾರೋಗ್ಯದಿಂದ ಉಸಿರುಗಟ್ಟಿ ಶ್ವಾಸಕೋಶ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ಪ್ರತಿಭಟನಾ ನಿರತರು ಗಮನ ಸೆಳೆದರು.
ನಾಲ್ವಡಿ ಮಹಾರಾಜರು 13 ಎಕರೆ ವಿಶಾಲವಾದ ಜಾಗದಲ್ಲಿ ಮೈಸೂರು ಸಿಲ್ಕ್ ಫ್ಯಾಕ್ಟರಿ ನಿರ್ಮಿಸಿದ್ದು, ಮುಂದೆ ಇದನ್ನು ವಿಸ್ತರಣೆ ಮಾಡಿ ಅಭಿವೃದ್ಧಿ ಮಾಡಲಿ ಎಂದು. ಈಗಾಗಲೇ ಮೈಸೂರು ಸಿಲ್ಕ್ ಫ್ಯಾಕ್ಟರಿ ಲಾಭದಲ್ಲಿದೆ. ದಿನದಿಂದ ದಿನಕ್ಕೆ ಮೈಸೂರು ಸಿಲ್ಕ್ ಸೀರೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರೇಷ್ಮೆ ಸೀರೆಗಳೇ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಈಗ ಲಾಭದಲ್ಲಿರುವ ಮೈಸೂರು ಸಿಲ್ಕ್ ಫ್ಯಾಕ್ಟರಿ ಯನ್ನು ವಿಸ್ತರಣೆ ಮಾಡಿ, ಹೆಚ್ಚೆಚ್ಚು ಕೆಲಸಗಾರರನ್ನು ನೇಮಕ ಮಾಡಿಕೊಂಡು, ಹೆಚ್ಚೆಚ್ಚು ಸೀರೆಗಳನ್ನು ಉತ್ಪಾದನೆ ಮಾಡುವುದನ್ನು ಬಿಟ್ಟು, ಲಾಭದಲ್ಲಿರುವ ಮೈಸೂರು ಸಿಲ್ಕ್ ಫ್ಯಾಕ್ಟರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ಹೊರಟಿರುವುದು ಅತ್ಯಂತ ಖಂಡನೀಯ ಹಾಗೂ ಈ ನಿರ್ಧಾರವೇ ಅವೈಜ್ಞಾನಿಕ ಎಂದು ಈ ವೇಳೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.
ರಾಜ್ಯ ಸರ್ಕಾರ ಟಿ. ನರಸೀಪುರದಲ್ಲಿಯೇ ಬೇರೆ ಸೂಕ್ತ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ ಯಾವುದೇ ಕಾರಣಕ್ಕೂ ಮೈಸೂರು ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸಿ, ಮರ ಗಿಡಗಳನ್ನು ಕಡಿಯಬಾರದು ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಪ್ರಭುಶಂಕರ್, ಗೋಲ್ಡನ್ ಸುರೇಶ್, ಕೃಷ್ಣಪ್ಪ, ಸಿಂಧುವಳ್ಳಿ ಶಿವಕುಮಾರ್, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ಗಿರೀಶ್ ಹೆಚ್, ವೇಣು ಗೋಪಾಲ್, ಶಿವಲಿಂಗಯ್ಯ, ವರಕೂಡು ಕೃಷ್ಣೇಗೌಡ, ಶ್ರೀನಿವಾಸ್, ನೇಹಾ, ಮಂಜುಳಾ, ಭಾಗ್ಯಮ್ಮ, ಡಾ . ಶಾಂತರಾಜೇ ಅರಸ್, ಡಾ.ನರಸಿಂಹೇಗೌಡ, ಜ್ಯೋತಿ, ಸುಜಾತ, ಗೀತಾ ಗೌಡ, ವಿಜಯೇಂದ್ರ, ಹನುಮಂತಯ್ಯ, ಬೇಬಿ ರತ್ನ, ವಾಣಿ, ಪುಷ್ಪವತಿ, ತಾಯೂರು ಗಣೇಶ್, ರಾಧಾಕೃಷ್ಣ , ನಾರಾಯಣ ಗೌಡ, ಎಳನೀರು ರಾಮಣ್ಣ, ಕುಮಾರ್ ಗೌಡ, ದರ್ಶನ್ ಗೌಡ, ಪ್ರದೀಪ್, ರಘು ಅರಸ್, ಆನಂದ್ ಗೌಡ, ತ್ಯಾಗರಾಜ್, ಗಣೇಶ್ ಪ್ರಸಾದ್, ಚಂದ್ರಶೇಖರ್, ರವೀಶ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
