ಮೈಸೂರು: ಇ.ಪಿ.ಎಸ್. 95 ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳ ನಿವೃತ್ತ ನೌಕರರಿಗೆ ಪಿ.ಎಫ್.ಮಾಸಿಕ ಪಿಂಚಣಿ ಕೇವಲ 500 ರೂಗಳಿಂದ 2500ರೂ ಬರುತ್ತಿದ್ದು, ದೈನಂದಿನ ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಎಂದು ನಿವೃತ್ತರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಮುಖ್ಯ ಮಂತ್ರಿಗಳುಗೆ ಪತ್ರ ಬರೆದಿರುವ ಇಪಿಎಸ್ 95, ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದವರು,ಇ.ಪಿ.ಎಸ್. 95 ಅಡಿಯಲ್ಲಿ ಸಹಕಾರ ಸಂಸ್ಥೆಗಳು, ಕೆ.ಎಂ.ಎಫ್ ಒಕ್ಕೂಟ, ಬೆಮೆಲ್, ಜೆ.ಕೆ. ಟೈರ್ಸ್, ಬಾಟ ಇಂಡಿಯ, ಅನೇಕ ನಿಗಮಗಳು, ಕೆ.ಎಸ್.ಆರ್.ಟಿ.ಸಿ., ಡಿ.ಸಿ.ಸಿ. ಬ್ಯಾಂಕ್, ಸಣ್ಣ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಇತ್ಯಾದಿಗಳು ಬರುತ್ತವೆ ಎಂದು ತಿಳಿಸಿದ್ದಾರೆ.
ಈ ಸಂಸ್ಥೆಗಳಲ್ಲಿ ದುಡಿದು ನಿವೃತ್ತರಾದ ನಮಗೆ ಪಿ.ಎಫ್.ಮಾಸಿಕ ಪಿಂಚಣಿ ಕೇವಲ 500 ರಿಂದ 2500 ರೂ ಬರುತ್ತಿದ್ದು, ದೈನಂದಿನ ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ. ಹತ್ತು ವರ್ಷಗಳಿಂದಲೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ, ರಾಜ್ಯ ಪ್ರತಿನಿಧಿಸುವ ಸಂಸದರು ಮತ್ತು ಪಿ.ಎಫ್ ನವರು ನಮ್ಮ ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಸ್ವಾಮಿಶೆಟ್ಟಿ ಜಿ.ಮತ್ತು ಪ್ರಧಾನ ಕಾರ್ಯದರ್ಶಿ ಮೋಹನ್ ಕೃಷ್ಣ ಬೇಸರ ತೋಡಿಕೊಂಡಿದ್ದಾರೆ.
ಇತ್ತ ಸಾಯಲೂ ಆಗದೇ, ಬದುಕಲೂ ಆಗದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ನಾವೆಲ್ಲರೂ 70 ವರ್ಷ ದಾಟಿದ್ದೇವೆ. ಈ ಇಳಿ ವಯಸ್ಸಿನಲ್ಲಿ ದುಡಿದು, ಬದುಕು ಸಾಗಿಸಲು ಕಷ್ಟವಾಗಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.
ಕೂಡಲೇ ಕರುಣೆ ತೋರಿ,ಕೇರಳ, ತೆಲಂಗಾಣ, ಹರಿಯಾಣ ರಾಜ್ಯಗಳಲ್ಲಿ ನೀಡಿರುವಂತೆ, ಪಿ.ಎಫ್. ವ್ಯಾಪ್ತಿಗೆ ಒಳಪಡುವ ಎಲ್ಲಾ ರೀತಿಯ ನಿವೃತ್ತ ನೌಕರರಿಗೆ ಮಾಸಿಕ ಕನಿಷ್ಠ 5000 ಮಂಜೂರು ಮಾಡುವಂತೆ ಸಮಸ್ತ ಕರ್ನಾಟಕದ ಇ.ಪಿ.ಎಸ್. 95 ನಿವೃತ್ತ ನೌಕರರ ಪರವಾಗಿ ಮನವಿ ಮಾಡುತ್ತೇವೆ ಎಂದು ಸ್ವಾಮಿಶೆಟ್ಟಿ ಜಿ,ಮೋಹನ್ ಕೃಷ್ಣ ತಿಳಿಸಿದ್ದಾರೆ.
