(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ 101 ಜಾತಿಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಿದ್ಧಪಡಿಸಿರುವ ಸಮೀಕ್ಷೆಯ ವರದಿಯು ಅವೈಜ್ಞಾನಿಕದಿಂದ ಕೂಡಿದೆ.
ಈ ವರದಿಯಿಂದ ಪರಿಶಿಷ್ಟ ಜಾತಿ ಬಲಗೈ ವರ್ಗದ 19 ಜಾತಿಗಳಿಗೆ ಹಾಗೂ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜನರಿಗೆ ಸಾಮಾಜಿಕವಾಗಿ ಅನ್ಯಾಯವಾಗುತ್ತಿದೆ,ಇದು ಖಂಡನೀಯ ಎಂದು ಸರ್ಕಾರದ ನಡೆಯನ್ನು ಖಂಡಿಸಿ ಇಲ್ಲಿನ ತಾಲ್ಲೂಕು ಬಲಗೈ ಸಮುದಾಯಗಳ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಿತು.
ಪಟ್ಟಣದ ಎಂ.ಜಿ.ಎಸ್.ವಿ ಕಾಲೇಜು ಮೈದಾನದಿಂದ ಹೊರಟ ಸಾವಿರಾರು ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ಮೂಲಕ ಬಸ್ ನಿಲ್ದಾಣ ತಲುಪಿ ಅಲ್ಲಿಂದ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ ಮತ್ತು ಡಾ. ಅಂಬೇಡ್ಕರ್ ರಸ್ತೆ ಮುಖಾಂತರ ಅಂಬೇಡ್ಕರ್ ವೃತ್ತ ತಲುಪಿದರು.
ರಸ್ತೆಯುದ್ಧಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಲ್ಲಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ, ನಾಗಮೋಹನ್ ದಾಸ್, ಬಲಗೈ ಸಮುದಾಯದ ಶಾಸಕರು ಸಚಿವರುಗಳಾದ ಪ್ರಿಯಾಂಕ ಖರ್ಗೆ, ಡಾ.ಎಚ್ ಸಿ ಮಹದೇವಪ್ಪ, ಅವರ ಭಾವಚಿತ್ರಗಳಿಗೆ ಹೊಡೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿ ಮುಂಭಾಗ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಅಲ್ಲಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ತಲುಪಿ ಸರ್ಕಾರದ ಈ ಅನ್ಯಾಯವನ್ನು ತೀವ್ರವಾಗಿ ಖಂಡಿಸಿದರು.
.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಈ ದೇಶದ ಬಹುಸಂಖ್ಯಾತ ಪರಿಶಿಷ್ಠ ಜಾತಿಯ ಬಲಗೈ ಸಂಬಂಧಿತ ಜಾತಿಗಳು ಶತ,ಶತಮಾನಗಳಿಂದ ಶಿಕ್ಷಣ ಉದ್ಯೋಗ ಮತ್ತು ಅಧಿಕಾರಗಳಿಂದ ವಂಚಿತರಾಗಿದ್ದವು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿರಂತರ ಶ್ರಮದಿಂದ ದೊರೆತ ಮೀಸಲಾತಿಯಿಂದ ಈಗಷ್ಟೇ ಒಂದೆರಡು ತಲೆಮಾರಿನಿಂದ ಶಿಕ್ಷಣ, ಉದ್ಯೋಗ ಕೆಲವೇ ಸೀಮಿತ ಅಧಿಕಾರಗಳನ್ನು ಪಡೆದು ಬಲಗೈ ಸಮುದಾಯ ಸುದಾರಣೆಯಾಗುತ್ತಿದೆ.
ಆದರೆ ಇದನ್ನು ಸಹಿಸದ ಜಾತಿವಾದಿಗಳು, ಕೋಮುವಾದಿಗಳು ಒಳಮೀಸಲಾತಿಯ ಹೆಸರಿನಲ್ಲಿ ಸಂಪೂರ್ಣ ಬಲಗೈ ಸಂಬಂಧಿತ ಜಾತಿಗಳನ್ನು ಮೀಸಲಾತಿಯಿಂದ ಹೊರಗಿಡಲು ಹುನ್ನಾರ ನಡೆಸುತ್ತಿವೆ. ಈ ರಾಜ್ಯವನ್ನಾಳಿದ ಜೆಡಿಎಸ್, ಬಿಜೆಪಿ, ಕಾಂಗ್ರೇಸ್ ಸರ್ಕಾರಗಳು ಬಲಗೈ ಸಂಬಂಧಿತ ಜಾತಿಗಳ ಈಗಿನ ಪರಿಸ್ಥಿತಿಗೆ ಕಾರಣವಾಗಿವೆ ಎಂದು ಪ್ರತಿಭಟನಾ ನಿರತರು ತೀವ್ರ ವಾಗ್ದಾಳಿ ನಡೆಸಿದರು.
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ 101 ಜಾತಿಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಿದ್ಧಪಡಿಸಿರುವ ಸಮೀಕ್ಷೆಯ ವರದಿಯು ಅವೈಜ್ಞಾನಿಕದಿಂದ ಕೂಡಿದೆ. ಈ ವರದಿಯಿಂದ ಪರಿಶಿಷ್ಟ ಜಾತಿ ಬಲಗೈ ವರ್ಗದ 19 ಜಾತಿಗಳಿಗೆ ಹಾಗೂ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜನರಿಗೆ ಸಾಮಾಜಿಕವಾಗಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ ಈ ವರದಿಯು ರಾಜ್ಯಪಾಲರಿಂದ ತಿರಸ್ಕಾರವಾಗಿ ಸರ್ಕಾರಕ್ಕೆ ವಾಪಸಾಗಿ ಮತ್ತೆ ರಾಜ್ಯಪಾಲರ ಬಳಿ ಹೋಗಿದೆ. ಈ ನಡುವೆ ನ್ಯಾಯಾಲಯವು ಮೀಸಲು ಪ್ರಮಾಣವನ್ನು ಪ್ರಶ್ನಿಸಿದೆ. ಸರ್ಕಾರವು ಮೀಸಲಾತಿಯನ್ನು ಶೇಕಡ 56 ರಷ್ಟು ಹೆಚ್ಚಿಸಿದ ಕಾರಣ ಉಚ್ಚನ್ಯಾಯಾಲವು ಮೀಸಲಾತಿ ಪ್ರಮಾಣ ಶೇಕಡ 50 ಮೀರಬಾರದು ಎಂದು ತಡೆಯಾಜ್ಞೆ ನೀಡಿದೆ ಎಂದು ಹೇಳಿದರು.
ಒಟ್ಟಾರೆ ಈ ವರದಿಗೆ ರಾಜ್ಯಪಾಲರ ಅಂಕಿತ ಬೀಳುವ ಮುನ್ನ ಹಾಗೂ ವರದಿಯಿಂದ ಯಾವುದೇ ಕಾಯಿದೆಗಳು ರಚನೆಯಾಗುವ ಮೊದಲು ಅಥವಾ ಒಳಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವ ಮೊದಲು ಉಂಟಾಗಿರುವ ಗೊಂದಲಗಳು ಪರಿಹಾರವಾಗುವ ತನಕ ಯಾವುದೇ ಸಂಸ್ಥೆ ಮತ್ತು ಇಲಾಖೆಗಳಿಂದಲೂ ಶೈಕ್ಷಣಿಕ ಮತ್ತು ಔದ್ಯೋಗಿಕ ಪ್ರಕ್ರಿಯೆಗಳು ನಡೆಯದಂತೆ ಸರ್ಕಾರವು ಆದೇಶಿಸಬೇಕು ಎಂದು ಒತ್ತಾಯಿಸಿದರು.
ಈ ಗೊಂದಲಗಳು ಪರಿಹಾರವಾಗುವ ತನಕ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಮುಂದುವರೆಸಲು ಆದೇಶಿಸಿ ಸಾಮಾಜಿಕ ನ್ಯಾಯ, ಸೌಹಾರ್ದತೆ ಮತ್ತು ಶಾಂತಿಯನ್ನು ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳಮೀಸಲಾತಿ ವರದಿಯ ಸಮಸ್ಯೆಯು ಸಂಪೂರ್ಣವಾಗಿ ಬಗೆಹರಿಯುವ ತನಕ ಪ್ರಸ್ತುತ ಶೈಕ್ಷಣಿಕ ವಲಯ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳಮೀಸಲಾತಿಯ ಕಾರ್ಯ ಚಟುವಟಿಕೆಗಳಿಗೆ ಶೀಘ್ರವೇ ತಡೆಯಾಜ್ಞೆ ನೀಡಬೇಕು,
ಹೊಸ ಜಾತಿ ಪ್ರಮಾಣ ಪತ್ರವನ್ನು ವಿತರಿಸುವುದನ್ನು ತುರ್ತಾಗಿ ನಿಲ್ಲಿಸಿ, ಹಳೆ ಜಾತಿ ಪ್ರಮಾಣ ಪತ್ರವನ್ನೇ ಮುಂದುವರಿಸಬೇಕು,
ಒಳಮೀಸಲಾತಿಗೆ ಅನ್ವಯಿಸಿರುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಿ
ಈ ಗೊಂದಲಗಳು ಪರಿಹಾರವಾಗುವ ತನಕ ಹಳೆ ಮೀಸಲಾತಿಯನ್ನೇ ಅನ್ವಯಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದು ಸೇರಿದಂತೆ ಹಲವಾರು ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ತಲುಪಿಸುವಂತೆ ಉಪವಿಭಾಗ ಅಧಿಕಾರಿ ದಿನೇಶ್ ಕುಮಾರ್ ಮೀನಾ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಟರಾಜು ಕಪಿಲ್, ಶೇಖರ್ ಬುದ್ಧ, ಹಂಪಾಪುರ ಬಸವಣ್ಣ, ಮುಳ್ಳೂರು ಕಮಲ್, ದಿಲೀಪ್, ಶಂಕರ್ ಚೇತನ್, ಸಿದ್ದಪ್ಪಾಜಿ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಪುಟ್ಟಸ್ವಾಮಿ, ಹೆಚ್.ಕೆ ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ, ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದಮೂರ್ತಿ, ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪಾಪಣ್ಣ, ಸಹಕಾರ್ಯದರ್ಶಿ ಶಶಿಧರ್, ಖಜಾಂಚಿ ರಾಜೇಶ್,ಕೂಡ್ಲೂರು ಶ್ರೀಧರ್ ಮೂರ್ತಿ, ನಟರಾಜು ಮಾಳಿಗೆ, ವಕೀಲರ ಸಂಘದ ಅಧ್ಯಕ್ಷ ಬಸವರಾಜು, ಮುಳ್ಳೂರು ಶಿವಮಲ್ಲು, ಚೇತನ್ ದೊರೆ, ವರದರಾಜು, ಗುರುಮೂರ್ತಿ, ಮಹಿಳಾ ಸಂಘಟನೆಯ ಶಿವಮ್ಮ,ಕನ್ನಡ ಸಂರಕ್ಷಣಾ ಪಡೆ ಜಿಲ್ಲಾಧ್ಯಕ್ಷ ಮಾಂಬಳ್ಳಿ ರಾಜೇಶ್ ಮಹಾಜನ್, ಜಗದೀಶ್ ಶಂಕನಪುರ, ಮಹದೇವ ಶಂಕನಪುರ, ಬಲಗೈ ಸಂಬಂಧಿತ ಜಾತಿಗಳ ಗಡಿ ಕಟ್ಟೆ ಕಸಭಾ ಹಾಗೂ ಪ್ರತಿಯೊಂದು ಗ್ರಾಮಗಳ ಯಜಮಾನರು, ಅಂಬೇಡ್ಕರ್ ಸಂಘಟನೆಗಳ ಪದಾಧಿಕಾರಿಗಳು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.
