ಬೆಂಗಳೂರು: ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರಸರ್ಕಾರದ ಕುತಂತ್ರವನ್ನ ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅಂತರರಾಷ್ಟ್ರೀಯ ವಾಣಿಜ್ಯ ಮೇಳ 2026 ಉತ್ಪದಾನೋತ್ತರ ಕೃಷಿ – ರೈತರ ಸಬಲೀಕರಣ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು.
ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಎಂದಿಗೂ ಬೆಂಬಲವಾಗಿ ನಿಂತಿದೆ,ಕೃಷಿ ಲಾಭದಾಯಕವಾಗಿಸಲು ಹಾಗೂ ಕೃಷಿಕರ ಸಬಲೀಕರಣವನ್ನು ಸಾಧಿಸಲು ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ. ಕೃಷಿ ಹಾಗೂ ಉತ್ಪಾದನೋತ್ತರ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಬಹುದಾಗಿದೆ,ರೈತರು ಉದ್ಯಮಿಗಳಾಗಬೇಕು, ಉತ್ಪನ್ನಗಳನ್ನು ಬೆಳೆಯುವ ಜೊತೆಗೆ, ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮಾರುಕಟ್ಟೆ , ಉಪ ಉತ್ಪನ್ನಗಳ ಅಭಿವೃದ್ಧಿಯಲ್ಲಿ ರೈತರು ನಿರತರಾಗಬೇಕು, ಕೃಷಿಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಕೊಳ್ಳುವುದು ಅಗತ್ಯವಿದೆ, ಇಂದಿನ ಪ್ರಶಸ್ತಿಗೆ ಭಾಜನರಾದ ಮಹಿಳಾ ಕೃಷಿಕರ ಸಾಧನೆ ಸ್ಪೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದರು.
ರೈತರಿಗೆ ಉತ್ತಮವಾದ ಬಿತ್ತನೆ ಬೀಜ, ಗೊಬ್ಬರ, ಔಷದಿ, ಸರ್ಕಾರ ಒದಗಿಸುತ್ತಿದೆ,
ಯಂತ್ರೋಪಕರಣಗಳ ಖರೀದಿಗೆ 1,500 ಕೋಟಿ ಸಹಾಯಧನವನ್ನು ನೀಡಲಾಗುತ್ತಿದೆ. ಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ, ದೇಶದಲ್ಲಿ ನಂ.1 ರಾಜ್ಯವಾಗಿದ್ದು, ಈವರೆಗೆ 6000 ಕೋಟಿ ರೂ.ಗಳ ವಿಮೆಪರಿಹಾರವನ್ನು ರೈತರಿಗೆ ವಿತರಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಶೇ.80 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದರು. ಈಗ ಈ ಪ್ರತಿಶತ ಶೇ. 62 ಕ್ಕೆ ಇಳಿದಿದೆ. ಕೃಷಿಯಲ್ಲಿ ಉತ್ಪಾದನೋತ್ತರ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ ಎಂದು ಸಲಹೆ ನೀಡಿದರು.
ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಬಹಳಷ್ಟು ಈಡೇರಿಸಲಾಗಿದ್ದು, ಅವುಗಳಲ್ಲಿ ಜಾರಿಯಾಗಿರುವ ಕೃಷಿ ಭಾಗ್ಯ ಯೋಜನೆ ಪ್ರಮುಖವಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ಈ ಹಿಂದೆ ಮನರೇಗಾ ಯೋಜನೆಯನ್ನು ಜಾರಿಗೊಳಿಸಿತ್ತು. ಇದರಡಿ ಮಹಿಳೆಯರು, ಅದಿವಾಸಿಗಳು, ಕಾರ್ಮಿಕರಿಗೆ ಉದ್ಯೋಗ ನೀಡುವ ಉತ್ತಮ ಯೋಜನೆಯಾಗಿದ್ದು, ಗ್ರಾಮಸಭೆಗಳಲ್ಲಿ ಕಾಮಗಾರಿಗಳು ನಿರ್ಧಾರವಾಗುತ್ತಿತ್ತು. ಆದರೆ ಈ ಅಧಿಕಾರವು ಈಗ ಕೇಂದ್ರ ಸರ್ಕಾರದ ಕೈಯಲ್ಲಿದ್ದು, ಅವರು ನಿರ್ಧರಿಸಿದಂತೆ ಕಾಮಗಾರಿ, ಅನುದಾನ ನೀಡಲಾಗುತ್ತದೆ. ರಾಜ್ಯದ ರೈತರೆಲ್ಲರೂ ಮನರೇಗಾ ಯೋಜನೆಯನ್ನು ಮರುಸ್ಥಾಪಿಸಿ, ವಿಬಿ ಜಿ ರಾಮ್ ಜಿ ಯೋಜನೆಯನ್ನು ತಿರಸ್ಕರಿಸಬೇಕು ಎಂಬು ಮನವಿ ಮಾಡಿದ್ದಾರೆ, ಮನರೇಗಾ ಅಡಿಯಲ್ಲಿ ಕಾರ್ಮಿಕರ ವೇತನ ಪೂರ್ತಿಯಾಗಿ ಕೇಂದ್ರವೇ ನೀಡುತ್ತಿತ್ತು. ಆದರೆ ಈಗ ಕೇಂದ್ರ ಕೇವಲ ಶೇ 60 ರಷ್ಟು ಅನುದಾನ ನೀಡುತ್ತಿದೆ,ರಾಜ್ಯ ಶೇ.40 ರಷ್ಟನ್ನು ಭರಿಸಬೇಕಾಗಿದೆ.ರಾಜ್ಯ ಸರ್ಕಾರಗಳ ಅಂಗೀಕಾರವಿಲ್ಲದೇ, ಮನರೇಗಾ ವನ್ನು ರದ್ದುಪಡಿಸಿ ವಿಬಿಜಿರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಲ್ಲಿನ ಮಹಾತ್ಮಾಗಾಂಧಿ ಹೆಸರನ್ನು ತೆಗೆಯಲಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
