ಮಂಡ್ಯ: ಮಳವಳ್ಳಿಯಲ್ಲಿ ಪ್ರತ್ಯೇಕವಾಗಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಿ,34 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಮಳವಳ್ಳಿ ಉಪವಿಭಾಗದ ಪೊಲೀಸರ ತಂಡ ವಶಪಡಿಸಿಕೊಂಡಿದೆ.
ಒಟ್ಟು 19 ಬೈಕ್ಗಳು ಹಾಗೂ ಚಿನ್ನಾಭರಣ ಸೇರಿದಂತೆ ಸುಮಾರು 34 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಮಳವಳ್ಳಿ ಉಪವಿಭಾಗದ ಪೊಲೀಸರ ತಂಡ ಯಶಸ್ವಿಯಾಗಿದೆ.
ಜ.9ರಂದು ಮಳವಳ್ಳಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದ ಜಾಗದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪಟ್ಟಣ ಪೊಲೀಸರು, ಜ.18ರಂದು ಸಂಜೆ ಮಳವಳ್ಳಿ ಪಟ್ಟಣದಲ್ಲಿಯೇ ಮೈಸೂರು ತಾಲ್ಲೂಕು ಕಾಮನಕೆರೆ ಹುಂಡಿ ಗ್ರಾಮದ ಕಾರ್ತಿಕ್ (23), ಮಳವಳ್ಳಿ ತಾಲ್ಲೂಕು ಬಾಣಸಮುದ್ರ ಗ್ರಾಮದ ಸಾಗರ್(23) ಮತ್ತು ಮಳವಳ್ಳಿ ಪಟ್ಟಣದ ಪ್ರಜ್ವಲ್ (23) ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ವಿವಿಧ ಕಂಪೆನಿಗೆ ಸೇರಿದ ಬೈಕ್ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕಿ ಡಾ.ವಿ.ಜೆ. ಶೋಭಾರಾಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11, ಕೊಳ್ಳೇಗಾಲ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಯಲ್ಲಿ ತಲಾ ಎರಡು ಪ್ರಕರಣಗಳು, ಕಿರುಗಾವಲಿನಲ್ಲಿ ಒಂದು, ಮಂಡ್ಯ ಪೂರ್ವ ಠಾಣೆಯಲ್ಲಿ ಎರಡು, ಮೈಸೂರು ನಗರ, ಮಳವಳ್ಳಿ ಟೌನ್ ವ್ಯಾಪ್ತಿಯಲ್ಲಿ ತಲಾ ಒಂದು ಸೇರಿದಂತೆ ಒಟ್ಟು 19 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ಏಳು ಲಕ್ಷ ರೂ.ಗಳು ಎಂದು ಎಸ್ಪಿ ತಿಳಿಸಿದರು.
ಈ ಮೂವರು ಹಿಂದೆ ಬಾರ್ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿದ್ದರು. ನಂತರ ಐಷಾರಾಮಿ ಜೀವನಕ್ಕಾಗಿ ಬೈಕ್ ಕಳ್ಳತನಕ್ಕಿಳಿದಿದ್ದರು. ಕಳವು ಮಾಡಿದ ಬೈಕ್ಗಳನ್ನು ಅಡವಿಟ್ಟು ಹಣ ಪಡೆಯುತ್ತಿದ್ದರು.
ಪ್ರಕರಣ ಪತ್ತೆ ಮಾಡಿದ ತನಿಖಾ ತಂಡದಲ್ಲಿದ್ದ ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್ ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಮಳವಳ್ಳಿ ಪಟ್ಟಣ ಠಾಣೆ ವೃತ್ತ ನಿರೀಕ್ಷಕ ಶಿವಲಿಂಗ ದಳವಾಯಿ, ಎಎಸ್ಐಗಳಾದ ಸುರೇಶ್, ಗೋಪಾಲ್, ಸಿಬ್ಬಂದಿಗಳಾದ ಮಾದೇಶ್, ಮಹದೇವಸ್ವಾಮಿ, ಹರ್ಷವರ್ಧನ್, ಪ್ರಭುಸ್ವಾಮಿ, ರಿಯಾಜ್ಪಾಷಾ, ವಿಕಾಸ್, ಶ್ರೀನಿವಾಸ್ ಮಧುಕಿರಣ್ ತಂಡವನ್ನು ಶೊಭಾರಾಣಿ ಅಭಿನಂದಿಸಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್ ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಎಸ್ಐ ಶಿವಲಿಂಗ ದಳವಾಯಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
