ರಾಯಚೂರು, ಫೆ.1: ರಾಜ್ಯದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕೆಲಸ ಮಾಡುತ್ತಿದ್ದು, ಗುರುಪೀಠದಲ್ಲಿ ಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಶಿಕ್ಷಣ, ಆಧ್ಯಾತ್ಮ ಮತ್ತು ಜಾತ್ಯಾತೀತ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಲೀನರಾದ ಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಎಂ ಮಾತನಾಡಿದರು.
ಕುರುಬ ಸಮುದಾಯಕ್ಕೆ ಮೊದಲ ಬಾರಿಗೆ ಕಾಗಿನೆಲೆ ಗುರುಪೀಠ 1992 ರಲ್ಲಿ ಸ್ಥಾಪಿತವಾಗಿ, ಶ್ರೀ ತಾರಕಾನಂದ ಸ್ವಾಮೀಜಿಯವರು ಅದರ ಮೊದಲ ಗುರುಗಳಾಗಿದ್ದರು ಎಂದು ಸಿಎಂ ಸ್ಮರಿಸಿದರು.
ಕಲ್ಯಾಣ ಕರ್ನಾಟಕ, ಬೆಂಗಳೂರು , ಮೈಸೂರು ಮುಂಬಯಿ ಕರ್ನಾಟಕ ವಿಭಾಗಗಳಿವೆ, ಈ ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ಗುರುಗಳಿದ್ದು, ಈ ವಿಭಾಗಕ್ಕೆ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಗುರುಗಳಾಗಿದ್ದರು.
ಗುರುಪೀಠದಲ್ಲಿ ಶಿಕ್ಷಣ, ಆಧ್ಯಾತ್ಮ, ಜಾತ್ಯಾತೀತ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದರು. ಕಾಗಿನೆಲೆ ಗುರುಪೀಠ ಸ್ಥಾಪನೆಯ ಉದ್ದೇಶವೇ ಸಮಸಮಾಜ ನಿರ್ಮಾಣ ವಾಗಿದೆ.ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗ ಹಾಗೂ ಇಡೀ ಸಮಾಜಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಕನಕದಾಸರು ಕುಲಕುಲವೆಂದು ಹೊಡೆದಾಡದಿರಿ ಎಂದಂತೆ ಬುದ್ಧಬಸವಾದಿ ಶರಣರು ಜಾತಿವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ನಮ್ಮ ಸಮಾಜ ವಿವಿಧ ಜಾತಿ ಧರ್ಮ ವರ್ಗ ಭಾಷೆಗಳಿಂದ ಕೂಡಿದೆ. ಮನುಜರೆಲ್ಲರೂ ಒಂದೇ ಕುಟುಂಬ ಎಂದು ಭಾವಿಸಬೇಕು. ಸಾಮಾಜಿಕ ಚಿಂತಕರಾದ ಲೋಹಿಯಾ ಅವರು ಮುಂದುವರಿದ ಜಾತಿಯವರು ಸಮಾಜವನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಾರೆ ಎಂದಿದ್ದರು. ಸಮಾನ ಅವಕಾಶವಿರುವ ಸಮಸಮಾಜವನ್ನು ನಿರ್ಮಿಸುವುದು ಅವಶ್ಯಕ. ಶಿಕ್ಷಣವಿಲ್ಲದೇ ಪ್ರಗತಿ ಸಾಧ್ಯವಿಲ್ಲ. ಕಾಗಿನೆಲೆ ಗುರುಪೀಠ ಸ್ಥಾಪನೆಯ ಉದ್ದೇಶವೇ ಸಮಸಮಾಜ ನಿರ್ಮಾಣ ವಾಗಿದೆ. ಯಾವುದೇ ಧರ್ಮವೂ ಪ್ರೀತಿಯನ್ನು ಬೋಧಿಸುತ್ತದೆಯೇ ಹೊರತು ದ್ವೇಷಿಸುವುದನ್ನು ಬೋಧಿಸುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಲವರು ಶಿಕ್ಷಣ ದೊರೆತರೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದಿಲ್ಲ. ಸ್ವಾಭೀಮಾನಿಗಳಾಗಿ ಬದುಕುವುದು ಮುಖ್ಯ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣವನ್ನ ಯುವಪೀಳಿಗೆ ಬೆಳೆಸಿಕೊಳ್ಳಬೇಕು ಸಿಎಂ ಸಲಹೆ ನೀಡಿದರು.
ಜನರ ಆರ್ಶೀವಾದದಿಂದ 8 ಬಾರಿ ಗೆದ್ದು, ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾಡಿನ ಎಲ್ಲ ಜನರ ಪ್ರೀತಿಯಿಂದಲೇ ರಾಜಕೀಯದಲ್ಲಿ ಇಂದಿಗೂ ಬದುಕಿದ್ದೇನೆ. ಈ ಸಮಾಜದ ಪ್ರೀತಿಗೆ ಬೆಲೆಕಟ್ಟಲಾಗದು. ಧ್ವನಿಯಿಲ್ಲದವರ ಪರವಾಗಿ ಹೋರಾಡುವುದೇ ನನ್ನ ಕೆಲಸ ಎಂದು ಸಿದ್ದರಾಮಯ್ಯ ತಿಳಿಸಿದರು.
ಇಡೀ ರಾಜ್ಯಕ್ಕೆ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಸತಿ ನಿಲಯ, ಯಾತ್ರಿ ನಿವಾಸ ಸೇರಿದಂತೆ ಹಲವು ಬೇಡಿಕೆಗಳಿಗೆ ಅನುದಾನ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಕುರುಬ ಸಮುದಾಯವನ್ನ ಎಸ್ ಟಿ ಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ, ರಾಜ್ಯ ಸರ್ಕಾರ ಈಗಾಗಲೇ ತನ್ನ ಶಿಫಾರಸ್ಸನ್ನು ಕೇಂದ್ರಕ್ಕೆ ಸಲ್ಲಿಸಿದೆ. ಜಾತಿಗಣತಿ ವರದಿ ಇನ್ನೊಂದು ತಿಂಗಳ ಅವಧಿಯಲ್ಲಿ ಸಲ್ಲಿಕೆಯಾಗಲಿದೆ, ಸೂಕ್ತ ಚರ್ಚೆಯ ನಂತರ ಅಂಗೀಕರಿಸಿ ಜಾರಿಗೊಳಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
