ಮೈಸೂರು,ಫೆ.1: ಬೈಕ್ನಲ್ಲಿ ಜಮೀನಿಗೆ ಹೋಗುತ್ತಿದ್ದ ರೈತ ದಂಪತಿ ಮೇಲೆ ಚಿರತೆ ದಾಳಿ ನಡೆಸಿದ್ದು, ಮಗು ಸೇರಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಬಳಿ ನಡೆದಿದೆ.
ಚುಂಚನಹಳ್ಳಿ ಗ್ರಾಮದ ರೈತ ನಂಜುಂಡಸ್ವಾಮಿ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಬೈಕ್ ನಲ್ಲಿ ಚುಂಚನಹಳ್ಳಿ -ಕೋಣನೂರು ರಸ್ತೆ ಬಳಿ ಇರುವ ಜಮೀನಿಗೆ ಹೋಗುತ್ತಿದ್ದರು.
ಆಗ ದಿಢೀರನೆ ಚಿರತೆ ದಾಳಿ ಮಾಡಿದೆ,ಹಾಗಾಗಿ ಮಗು ಸಮೇತ ರೈತ ದಂಪತಿ ಬೈಕ್ನಿಂದ ಬಿದ್ದಿದ್ದಾರೆ, ಗಂಭೀರ ಗಾಯಗಳಾಗಿವೆ.
ಸ್ಥಳೀಯರು ಕೂಡಲೇ ತಗಡೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು,ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಸಿ ದಾಖಲಿಸಲಾಗಿದೆ.
ಚುಂಚನಹಳ್ಳಿ, ಕೋಣನೂರು, ಹನುಮನಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆಯ ಕಾಟ ಹೆಚ್ಚಾಗಿದೆ, ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ.ಇದೀಗ ಜಮೀನಿಗೆ ಹೋಗುವ ರೈತರ ಮೇಲು ದಾಳಿ ನಡೆಸುತ್ತಿವೆ ಇದರಿಂದ ಜಮೀನಿಗೆ ಹೋಗಲು ರೈತರು ಹೆದರುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಕಲ್ಯಾಣ ಸಂಘದವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
