ಮೈಸೂರು: ಗಣರಾಜ್ಯೋತ್ಸವ ದಿನದಂದು ಜಿಲ್ಲೆಯ ಸರಕಾರಿ ಕಚೇರಿಗಳು, ಶಾಲಾ, ಕಾಲೇಜುಗಳು ಹಾಗೂ ಖಾಸಗಿ ಬ್ಯಾಂಕ್ ಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವ ಭಾರತ ಸಂಘಟನೆಯ ಸಂಚಾಲಕ ಜೋಗಿ ಮಂಜು ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಸಂಗೊಳ್ಳಿ ರಾಯಣ್ಣ ಹೋರಾಟದಲ್ಲಿ ಭಾಗಿಯಾಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಾಗೂ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು ವೀರಮರಣವನ್ನಪ್ಪಿದ ದೇಶಭಕ್ತರಾಗಿದ್ದಾರೆ.
ಅವರ ತ್ಯಾಗದ ಕುರಿತು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ರಾಯಣ್ಣ ಅವರ ತ್ಯಾಗ ಬಲಿದಾನ ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜೋಗಿ ಹೇಳಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸುವಂತೆ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಆದೇಶವಾಗಿದೆ,ಇದನ್ನು ಅನುಪಾಲನೆ ಮಾಡಲು ಕ್ರಮ ವಹಿಸಬೇಕು ಎಂದು ಜೋಗಿ ಮಂಜು ಆಗ್ರಹಿಸಿದ್ದಾರೆ.
