ಮೈಸೂರು: ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ಹಲ್ಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಇದು ಸಹಿಸುವಂತದಲ್ಲ ಕನ್ನಡಿಗರ ತಾಳ್ಮೆಯನ್ನು ಪದೇಪದೆ ಪರೀಕ್ಷಿಸುವ ಕೆಲಸವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ತಮಿಳುನಾಡಿನಲ್ಲಿ ಕೆಲವು ಕಿಡಿಗೇಡಿಗಳು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಬರಿಮಲೆ ಮತ್ತು ಓಂಶಕ್ತಿ ಮಾಲಾಧಾರಿಗಳು ಮತ್ತು ಚಾಲಕರಿಗೆ ಥಳಿಸುವ ಕೆಲಸವನ್ನು ಕೆಲವು ಕಿಡಿಗೇಡಿಗಳು ರೂಢಿಸಿಕೊಂಡಿದ್ದಾರೆ. ಮೊದಲು ನಮ್ಮ ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು. ಈರೋಡ್ ಪ್ರಕರಣದಲ್ಲಿ ಈಗಾಗಲೇ ಅಲ್ಲಿನ ಪೊಲೀಸರು ಕ್ರಮ ಕೈಗೊಳ್ಳುವ ಕೆಲಸ ಮಾಡಿದ್ದಾರೆ ಅದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ಅಲ್ಲಿನ ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದು ವಿಕ್ರಮ್ ಅಯ್ಯಂಗಾರ್ ಆಗ್ರಹಿಸಿದ್ದಾರೆ.
