ಮೈಸೂರು: ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ,ಗಡಿ ಬಂದ್ ಗೆ ಕರೆ ನೀಡಿರುವುದಕ್ಕೆ ಕರ್ನಾಟಕ ಪ್ರಜಾ ಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ಅಶೋಕ್ ರಾಜ್ ಅವರು ಬೆಂಬಲ ಸೂಚಿಸಿ ಬೆಂಬಲ ಸೂಚಿಸಿದ್ದಾರೆ.
ಶಬರಿಮಲೆಗೆ ತೆರಳುತ್ತಿದ್ದ ಕನ್ನಡಿಗರ ವಾಹನದಲ್ಲಿದ್ದ ಕನ್ನಡ ಬಾವುಟವನ್ನು ತೆಗೆಯುವಂತೆ ಆಗ್ರಹಿಸಿ,
ತಮಿಳುನಾಡಿನಲ್ಲಿನ ಕೆಲ ಗೂಂಡಾ ಗುಂಪು ಕನ್ನಡಿಗ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಮುಂದಿನ ದಿನಗಳಲ್ಲಿ ಚಾಮರಾಜನಗರ ಗಡಿ ಬಂದ್ ಮಾಡುವುದಾಗಿ ಕರೆ ನೀಡಿದ್ದರು.
ಅದಕ್ಕೆ ಸ್ಪಂದಿಸಿ, ಚಾಮರಾಜನಗರ ಗಡಿ ಬಂದ್ ಗೆ ಕರ್ನಾಟಕ ಪ್ರಜಾ ಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ಅಶೋಕ್ ರಾಜ್ ಅವರು ಬೆಂಬಲ ಸೂಚಿಸಿ ಕನ್ನಡಿಗರ ಮೇಲೆ ತಮಿಳು ಗೂಂಡಾಗಳು ಹಲ್ಲೆ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ತಮಿಳಿಗರು ಮತ್ತು ಕನ್ನಡಿಗರು ಕರ್ನಾಟಕದಲ್ಲಿ ಸೋದರ ಭಾವದಿಂದ ಬಾಳುತ್ತಿರುವಾಗ, ತಮಿಳುನಾಡಿನ ಕೆಲವು ಗೂಂಡಾಗಳು ಕನ್ನಡಿಗ ಪ್ರಯಾಣಿಕರನ್ನು ಗುರಿಯಾಗಿಸಿ ಹಲ್ಲೆ ನಡೆಸುವುದು, ಕನ್ನಡಿಗರ ಅಸ್ಮಿತೆಯಾದ ಕೆಂಪು ಹಳದಿ ಬಾವುಟವನ್ನು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಶೋಕ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೆ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ತೆರಳಿ ತಮಿಳುನಾಡು ಗಡಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ತಮಿಳುನಾಡಿನ ಚುನಾವಣೆ ಸನಿಹದಲ್ಲಿರುವಾಗ ಇಂತಹ ಪ್ರಾದೇಶಿಕ ದ್ವೇಷವನ್ನೂ ಅಸ್ತ್ರವಾಗಿಸಿಕೊಳ್ಳುವ ಹುನ್ನಾರ ಇದರಲ್ಲಿದೆ. ಚಾಮರಾಜನಗರ ಜಿಲ್ಲೆಯ ಜನ ಪ್ರತಿನಿಧಿಗಳು ಪಕ್ಷಾತೀತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಕ್ಷಣವೇ ತಮಿಳುನಾಡು ಮುಖ್ಯಮಂತ್ರಿಗಳಿಗೆ ಘಟನೆಯ ಕುರಿತು ಕ್ರಮ ಕೈಗೊಳ್ಳುವಂತೆ, ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಆಗ್ರಹಿಸಬೇಕು ಎಂದು ಕರ್ನಾಟಕ ಪ್ರಜಾ ಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ಅಶೋಕ್ ರಾಜ್ ಒತ್ತಾಯಿಸಿದ್ದಾರೆ.
