ಯಾದಗಿರಿ: ಐತಿಹಾಸಿಕ,ಪೌರಾಣಿಕ ಹಿನ್ನೆಲೆಯ ತಾಲ್ಲೂಕಿನ ಮೈಲಾಪುರದ ಮಲ್ಲಯ್ಯನ ಜಾತ್ರೆ ಮಕರ ಸಂಕ್ರಮಣ ಭಕ್ತಸಾಗರದ ನಡುವೆ ಜರುಗಿತು.
ಮಲ್ಲಯ್ಯನ ಮೂರ್ತಿ ಗಂಗಾ ಸ್ನಾನಕ್ಕೆ ಹೊನ್ನ ಕೆರೆಗೆ ತೆರಳುವ ಸಮಯದಲ್ಲಿ ಪಲ್ಲಕ್ಕಿ ಮೇಲೆ ಹಾರಿಸಲು ತಂದಿದ್ದ 780 ಕುರಿಮರಿಗಳನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ.ಇದರಿಂದ ಭಕ್ತರು ಬೇಸರಗೊಂಡರು.
ಈ ಹಿಂದೆ ಪಲ್ಲಕ್ಕಿ ಮೆರವಣಿಗೆ ಮೇಲೆ ಕುರಿಮರಿಗಳನ್ನು ಭಕ್ತರು ಎಸೆದು ಹರಕೆ ತೀರಿಸುತ್ತಿದ್ದರು, ಆದರೆ ಜಾತ್ರೆಯಲ್ಲಿ ಪ್ರಾಣಿ ಹಿಂಸೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಕುರಿಮರಿ ಹಾರಿಸುವದನ್ನು ನಿಷೇಧಿಸಿದೆ.
ಆದರೂ ಗ್ರಾಮೀಣ ಭಾಗದ ಭಕ್ತರು ಜಾತ್ರೆಗೆ ತಮ್ಮ ಕುರಿಮರಿಗಳನ್ನು ತರುವುದನ್ನು ಬಿಟ್ಟಿಲ್ಲ, ಹೀಗಾಗಿ ಜಿಲ್ಲಾಡಳಿತ ದೇವಸ್ಥಾನಕ್ಕೆ ಆಗಮಿಸುವ ೪ ರಸ್ತೆಗಳಲ್ಲಿ ಪಶುಸಂಗೋಪನೆ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳನ್ನು ನೇಮಕ ಮಾಡಿ, ಚೆಕ್ಪೋಸ್ಟ್ ಗಳನ್ನು ಹಾಕಿದ್ದರು.
ಮಂಗಳವಾರ ಸಂಜೆಯಿಂದಲೇ ಜಾತ್ರೆಗೆ ಬರುವ ಭಕ್ತರನ್ನು ತಪಾಸಣೆ ಮಾಡಿ, ಅವರು ತಂದಿದ್ದ ಕುರಿಮರಿಗಳನ್ನು ವಶಕ್ಕೆ ಪಡೆದು ಕಟ್ಟುನಿಟ್ಟಿನ ನಿಯಮ ಪಾಲಿಸಿದ್ದಾರೆ.
