ಹುಣಸೂರು: ಹುಣಸೂರು ತಾಲೂಕು ಹೊನ್ನಿಕುಪ್ಪೆ ಗ್ರಾಮಕ್ಕೆ ಕಡೆಗೂ ಬಸ್ ಸೌಲಭ್ಯ ದೊರಕಿದ್ದು ಗ್ರಾಮಸ್ಥರು ಫುಲ್ ಖುಷಿಯಾಗಿಬಿಟ್ಟಿದ್ದಾರೆ.
ಹಿಂದೆ ಡಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಹೊನ್ನೆಕುಪ್ಪೆ ಗ್ರಾಮ ಬೆಳೆಯಲು ಕಾರಣರಾಗಿದ್ದರು.
ಸುಮಾರು 60 – 70 ವರ್ಷಗಳಿಂದ ಈ ಗ್ರಾಮಕ್ಕೆ ಬಸ್ ಸೌಲಭ್ಯ ಇರಲಿಲ್ಲ. ಬೀಜಗನಹಳ್ಳಿ ಮಾರ್ಗವಾಗಿ ತಮ್ಮ ಗ್ರಾಮಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಕರ್ನಾಟಕ ಪ್ರಜಾ ಪರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ನೇತೃತ್ವದಲ್ಲಿ ಆರು ತಿಂಗಳಿಂದ ಸದಸ್ಯರು ಮತ್ತು ಗ್ರಾಮಸ್ಥರು ಹೋರಾಟ ಮಾಡುತ್ತಾ ಬಂದಿದ್ದರು.
ಅದು ಇತ್ತೀಚೆಗೆ ಫಲ ಕೊಟ್ಟಿದ್ದು ಅಂತೂ ಇಂತೂ ಬೀಜಗನಹಳ್ಳಿ ಮಾರ್ಗವಾಗಿ ಕೆ ಎಸ್ ಆರ್ ಟಿ ಸಿ ಬಸ್ ಊರಿಗೆ ತಲುಪಿದೆ.
ಇಂದು ಗ್ರಾಮದ ಕನ್ನಂಬಾಡಮ್ಮ ದೇವಸ್ಥಾನದ ಮುಂದೆ ಪೂಜೆ ಸಲ್ಲಿಸಿ ಬಸ್ಸನ್ನು ಅಲಂಕರಿಸಿ ಹಸಿರು ನಿಶಾನೆ ತೋರಲಾಯಿತು.
ಈ ವೇಳೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹರ್ಷೊದ್ಗಾರ ಮಾಡಿ ಬಸ್ ಅನ್ನು ಬೇಳ್ಕೊಟ್ಟರು.
ಈ ಬಸ್ ಸೌಲಭ್ಯದಿಂದಾಗಿ ಗ್ರಾಮಸ್ಥರಿಗೆ ಮತ್ತು ಮುಖ್ಯವಾಗಿ ಶಾಲಾ-ಕಾಲೇಜು ಮಕ್ಕಳಿಗೆ ಅತ್ಯಂತ ಅನುಕೂಲವಾಗಿದೆ.
ಈ ಸಂದರ್ಭದಲ್ಲಿ ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಾಳೇಗೌಡ,ಮಂಜುಳ, ಕೋ ಆಪರೇಟಿವ್ ಸೊಸೈಟಿ ಸದಸ್ಯ ಮಹಾದೇವ, ಊರಿನ ಯಜಮಾನರಾದ ಸೋಮಣ್ಣ, ವೆಂಕಟಬೋವಿ, ಮಹಾದೇವ್ ಮತ್ತು ಹೊನ್ನಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯೆ ರಾಮಾಬೋವಿ,ಉದ್ದೂರು ಕಾವಲ್ ಗ್ರಾಪಂ ಅಧ್ಯಕ್ಷ ದೇವರಾಜು, ಊರಿನ ಮುಖಂಡರಾದ ಬಾಲು, ಕುಮಾರ, ಡಿಸಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ರವಿ, ಉಪಾಧ್ಯಕ್ಷ ವಿಜಿ, ಕಾರ್ಯದರ್ಶಿ ಲೋಕೇಶ್ ಅಲ್ಲದೆ ಗ್ರಾಮಸ್ಥರಾದ ಶಿವಣ್ಣ, ಗೋವಿಂದರಾಜು ಸೇರಿದಂತೆ ಅನೇಕ ಜನರು ಪಾಲ್ಗೊಂಡು ಸಂಭ್ರಮಿಸಿದರು.
ಹೊನ್ನಿಕುಪ್ಪೆ ಗ್ರಾಮಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಬರಲು ಸಹಕರಿಸಿದ ಹುಣಸೂರಿನ ಡಿಪೋ ಮ್ಯಾನೇಜರ್ ಹಾಗೂ ಅಧಿಕಾರಿಗಳು ಸಿಬ್ಬಂದಿಗಳ ಸಹಕಾರಕ್ಕೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾ.ಅಧ್ಯಕ್ಷ ಚೆಲುವರಾಜು ಮತ್ತು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
