(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ವಿಜಯಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕ ಕೊಳ್ಳೇಗಾಲದಲ್ಲಿ ನೂತನವಾಗಿ ಪ್ರಾರಂಭವಾಯಿತು.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ವಿಜಯಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಬಿ.ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮತ್ತು ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪಟ್ಟಣ ಠಾಣೆ ಪಿಎಸ್ಐ ವರ್ಷ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕನ್ನಡ ಕೇವಲ ಭಾಷೆಯಾಗಿ ಬೆಳೆದಿಲ್ಲ ಭಾವನೆಯಾಗಿ ಬೆಳದಿದೆ ಎಂದು ಹೇಳಿದರು.
ಕನ್ನಡ ನನಗೆ ಅಚ್ಚುಮೆಚ್ಚಿನ ಭಾಷೆ, ಕನ್ನಡವನ್ನು ಬೆಳೆಸಿ ಎಂದು ಹೇಳುತ್ತಾರೆ ಆದರೆ ಅದನ್ನು ಬೆಳೆಸಬೇಕಾಗಿಲ್ಲ ಬಳಸಿದರೆ ಸಾಕು. ಬೇರೆ ಭಾಷೆಯ ಮೇಲೆ ಪ್ರೀತಿ ಇರಲಿ ಆದರೆ ಕನ್ನಡ ಭಾಷೆಯ ಮೇಲೆ ಅಭಿಮಾನವಿರಲಿ, ನಿಮ್ಮ ನಡೆ ಪಾರಂಪರಿಕವಾಗಿರಲಿ ನಮ್ಮ ಇಲಾಖೆಯಿಂದ ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರಲ್ಲದೆ ಸಂಘಟನೆ ಅಚ್ಚಳಿಯದಂತೆ ಉಳಿಯುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದ ವಿಜಯಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಬಿ.ಮಹೇಶ್ ಕುಮಾರ್ ಅವರು ಮಾತನಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸಿ ರಾಜ್ಯದ ಹಿತಾಸಕ್ತಿಗಾಗಿ ಹೋರಾಡಿ ಎಲ್ಲರ ಸಮಸ್ಯೆ ಬಗೆಹರಿಸಲು ಶ್ರಮಿಸಲಾಗುವುದು ಎಂದು ಹೇಳಿದರು.
ಎಲ್ಲರ ಸಲಹೆ ಸ್ವೀಕರಿಸಿ, ವ್ಯಕ್ತಿಯ ವಿರುದ್ಧ ಹೋಗಬೇಡಿ. ಜಾತಿ, ಧರ್ಮ ರಾಜಕೀಯ ಈ ಮೂರರಲ್ಲಿ ಸಂಘಟನೆಯೊಳಗೆ ಯಾವುದೇ ತೂರಿದರು 10 ಭಾಗವಾಗುತ್ತದೆ.
ಸಾರ್ವಜನಿಕರ ಸಮಸ್ಯೆ ವಿರುದ್ಧ ಹೋರಾಡೋಣ, ಮನವಿ ಮೂಲಕ ಹೋರಾಟ ಮಾಡೋಣ ಆದರೆ ದಬ್ಬಾಳಿಕೆ ಮಾಡಲು ಹೋಗಬಾರದು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಶಾಶ್ವತವಾಗಿ ಉಳಿಯುತ್ತದೆ ಎಂದು ಕಿವಿ ಮಾತು ಹೇಳಿದರು.
ಸಂಘಟನೆಗೆ ಒಂದು ಸಣ್ಣ ಕಪ್ಪು ಚುಕ್ಕಿ ಬಾರದ ಹಾಗೆ ನಡೆದುಕೊಳ್ಳಿ ಒಂದು ಬಾರಿ ಕಪ್ಪು ಚುಕ್ಕಿ ಬಂದರೆ ಅದನ್ನು ಅಳಿಸಲು ಸಾಧ್ಯವಿಲ್ಲ. ಕಾನೂನು ಚೌಕಟ್ಟು ಮೀರ ಬಾರದು ಸಂವಿಧಾನ ಚೌಕಟ್ಟು ದಾಟಬಾರದು, ಚೌಕಟ್ಟು ಮೀರಿದರೆ ಅಪಾಯ,23 ಜಿಲ್ಲೆಗಳಲ್ಲಿ ನಾವು ಸಂಘಟನೆ ಮಾಡಿದ್ದೇವೆ. ಈ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು, ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿ ಸಂಘಟನೆ ಆರಂಭವಾಗಬೇಕು ಎಂದು ಎಂ.ಬಿ.ಮಹೇಶ್ ಕುಮಾರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾಗಿ ಪಿ.ಶಿವಸುಂದರ್ ಹಾಗೂ ತಾಲ್ಲೂಕು ಅಧ್ಯಕ್ಷರಾಗಿ ಎಂ.ರೇವಣ್ಣರವರು ಪದಗ್ರಹಣ ಮಾಡಿದರು
ತಾಲ್ಲೂಕು ಅಧ್ಯಕ್ಷ ರೇವಣ್ಣ ಮಾತನಾಡಿ ಯಾವುದೇ ಜಾತಿ, ಧರ್ಮ ಸಂಘಟನೆಯೊಳಗೆ ತೂರದಂತೆ ಜಾತ್ಯತೀತವಾಗಿ ಸಂಘಟನೆ ಮಾಡುತ್ತೇವೆ. ಕನ್ನಡ ನಾಡು ನುಡಿ ಭಾಷೆ,ಜಲದ ರಕ್ಷಣೆಗೆ ದುಡಿಯುತ್ತೇವೆ ಎಂದು ಶಪಥ ಮಾಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿಕ್ಕಮಾಳಿಗೆ ಮಾತನಾಡಿ ನಿಮ್ಮ ಸಂಘಟನೆಗೆ ಪತ್ರಕರ್ತರ ಸಂಘ ಸದಾ ಸಹಕಾರಿಯಾಗಲಿದೆ ಎಂದು ಭರವಸೆ ನೀಡಿದರು. ಇದೇ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮಹಿಳಾ ಮತ್ತು ಕಾರ್ಮಿಕರ ಸಹಾಯವಾಣಿ (9380991235) ಬಿಡುಗಡೆ ಮಾಡಲಾಯಿತು.
ರಾಜ್ಯ ಉಪಾಧ್ಯಕ್ಷ ದೇವರಾಜು, ಕಾರ್ಮಿಕ ಘಟಕದ ಅಧ್ಯಕ್ಷ ಹರ್ಷವರ್ಧನ್ ಶ್ರೀ ನಿವಾಸ್, ಜಿಲ್ಲಾ ಗೌರವ ಅಧ್ಯಕ್ಷ ವೆಂಕಟಚಲ, ಉಪಾಧ್ಯಕ್ಷ ಆನಂದ್, ಅಜಯ್, ಸಂಚಾಲಕ ಮೂರ್ತಿ, ಹನೂರು ತಾಲ್ಲೂಕು ಅಧ್ಯಕ್ಷ ಮಹೇಶ್, ಯಳಂದೂರು ಅಧ್ಯಕ್ಷ ದೊಡ್ಡರಾಜು, ಟಿ.ನರಸೀಪುರ ಅಧ್ಯಕ್ಷ ಗುರು, ಗೌರವ ಅಧ್ಯಕ್ಷ ದೇವರಾಜು ಕೊಳ್ಳೇಗಾಲ ತಾಲ್ಲೂಕು ಗೌರವ ಅಧ್ಯಕ್ಷ ಮಂಟೇಲಿಂಗ ಉಪಾಧ್ಯಕ್ಷ ಅಜಯ್,
ಉಮೇಶ್, ಪ್ರಧಾನ ಕಾರ್ಯದರ್ಶಿ ಭರತ್, ರಾಜು, ಮಹದೇವಸ್ವಾಮಿ, ಸಂಚಾಲಕ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
