ಮೈಸೂರು: ಕೆಲ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಸರ್ವರಿಗೂ ಸಿಗುವಂತೆ ಮಾಡಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಕೃಷ್ಣರಾಜ ಯುವಬಳಗ ಆಯೋಜಿಸಿದ್ದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅಯೂಬ್ ಖಾನ್ ಅವರು,ಹೆಣ್ಣು ಸಮಾಜದ ಕಣ್ಣು ಎಂದು ಅವರು ಪಟ್ಟ ಶ್ರಮ ಸ್ಮರಣೀಯ ಎಂದು ಹೇಳಿದರು.
ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆ ಆರಂಭಿಸುವ ಮೂಲಕ ಮಹಿಳಾ ಶಿಕ್ಷಣ ಪದ್ಧತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ ಬರೆದರು. ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತ ಮಾಡಿದ ಕಾಲದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಪರಿಣಾಮ ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಲು ಕಾರಣವಾಗಿದೆ ಎಂದು ತಿಳಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್ ಮಾತನಾಡಿ,ತೊಟ್ಟಿಲು ತೂಗುವ ಕೈಗಳು ದೇಶವನ್ನು ಮುನ್ನಡೆಸುತ್ತವೆ ಎಂಬ ಘೋಷಣೆಯೊಂದಿಗೆ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಸಾಕಷ್ಟು ಹೋರಾಟ ಮಾಡಿದರು. ಪ್ರತಿವರ್ಷ ಫುಲೆ ಅವರ ಜನ್ಮದಿನವನ್ನು ‘ಶಿಕ್ಷಕಿಯರ ದಿನ’ವನ್ನಾಗಿ ಆಚರಿಸಿದಲ್ಲಿ ಹೆಚ್ಚಿನ ಅರ್ಥ ಸಿಗಲಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಟಿ. ಗುರುರಾಜ್,ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಕಾಂಗ್ರೆಸ್ ಯುವ ಮಖಂಡರಾದ ರಾಕೇಶ್ ಕುಮಾರ್, ಕೆ.ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ, ಕೃಷ್ಣರಾಜ ಯುವ ಬಳಗ ಅಧ್ಯಕ್ಷ ನವೀನ್ ಕೆಂಪಿ, ನಿರೂಪಕ ಅಜಯ್ ಶಾಸ್ತ್ರಿ, ರಂಗಸ್ವಾಮಿ ಪಾಪು, ಪದ್ಮನಾಭ್ ಗುಂಡಣ್ಣ, ಮೆಲ್ಲಹಳ್ಳಿ ರಾಜೇಶ್ ಗೌಡ, ಮಹೇಂದ್ರ ಕಾಗಿನೆಲೆ, ಜಯಲಕ್ಷ್ಮಿ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
