(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತಾಲ್ಲೂಕಿನ ಹಳೇ ಹಂಪಾಪುರ ಗ್ರಾಮದಲ್ಲಿ ರೈತರಿಗೆ ಒಣ ನೇರ ಬಿತ್ತನೆಯ ಭತ್ತ ಬೆಳೆಯುವುದರ ಉಪಯೋಗಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು
ಕಿಸಾನ್ ಕ್ರಾಫ್ಟ್ ವತಿಯಿಂದ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ ವೇಳ ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿರವರು ಮಾತನಾಡುತ್ತಾ ಭತ್ತ ಸಾಗುವಳಿ ಮತ್ತು ಉತ್ಪಾದನೆ ಭಾರತದ ಆರ್ಥಿಕತೆಗೆ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.
ನೀರಿನ ಕೊರತೆ ಮತ್ತು ಜ್ಞಾನದ ಕೊರತೆಯಂತಹ ಹಲವಾರು ಸಮಸ್ಯೆಗಳು, ಈ ಬೆಳೆ ಉತ್ಪಾದನೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತವೆ. ಭತ್ತ ಬೆಳೆಯುವ ಪದ್ದತಿಯಲ್ಲಿ ಬರುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಾವು ಕಿಸಾನ್ ಕ್ರಾಫ್ಟ್ನಲ್ಲಿ ಒಣ ನೇರ ಬಿತ್ತನೆಯ ಭತ್ತದ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಇದು ಶೇ.50 ರಷ್ಟು ಕಡಿಮೆ ನೀರಿನಲ್ಲಿ, ಸಾಂಪ್ರದಾಯಿಕ ಭತ್ತದಷ್ಟೇ ಇಳುವರಿಯನ್ನು ಕೊಡುತ್ತದೆ ಎಂದು ಮಾಹಿತಿ ನೀಡಿದರು.
ಈ ಭತ್ತವನ್ನು ಉತ್ತಮ ಗಾಳಿಯಾಡುವ ಭೂಮಿಯಲ್ಲಿ ನೇರ ಒಣ ಬಿತ್ತನೆ ಮಾಡಬಹುದು. ಕೆಸರು ಗದ್ದೆ ಮಾಡುವ ಅಗತ್ಯವಿಲ್ಲ. ಸರದಿ ಬೆಳೆಯಾಗಿ ಹಾಗು ದ್ವಿದಳ ಧಾನ್ಯ, ತರಕಾರಿ ಮತ್ತು ಎಣ್ಣೆಕಾಳು ಬೆಳೆಗಳ ಜೊತೆ ಮಿಶ್ರ ಬೆಳೆಯಾಗಿಯೂ ಬೆಳೆಯಬಹುದು. ದೀರ್ಘಾವಧಿಯಲ್ಲಿ ಇದು ಮಣ್ಣಿನ ಫಲವತ್ತತೆಯನ್ನು ಉತ್ತಮಗೊಳಿಸುತ್ತದೆ ಎಂದು ತಿಳಿಸಿದರು.
ಕಿಸಾನ್ ಕ್ರಾಫ್ಟ್ ವ್ಯವಸ್ಥಾಪಕ ಸೌರಭ್ ಪಾಟೀಲ್ ಅವರು ಮಾತನಾಡಿ ಒಣ ನೇರ ಬಿತ್ತನೆಯ ಭತ್ತದ ಉಪಯೋಗಗಳೆಂದರೆ ಸಾಂಪ್ರದಾಯಿಕ ನೀರಾವರಿ ಭತ್ತದ ಪದ್ಧತಿಗೆ ಹೋಲಿಸಿದರೆ ಶೇಖಡಾ 50ಕ್ಕಿಂತ ಹೆಚ್ಚು ನೀರು ಉಳಿತಾಯವಾಗುತ್ತದೆ, ಹಾಗೂ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ, ಹಸಿರು ಮನೆ ಅನಿಲ ಹೊರಸೂಸುವಿಕೆ, ಮತ್ತು ಕೂಲಿ ಕಾರ್ಮಿಕರ ವೆಚ್ಚ ಕಡಿಮೆ. ಮಣ್ಣಿನ ಫಲವತ್ತತೆಯ ಅನುಗುಣವಾಗಿ ಪ್ರತಿ ಹೆಕ್ಟೇರ್ ಗೆ 55 ಕ್ವಿಂಟಾಲ್ ಅಥವಾ ಅದಕ್ಕಿಂತ ಹೆಚ್ಚಿನ ಇಳುವರಿಯನ್ನು ರೈತರು ಒಣ ನೇರ ಬಿತ್ತನೆಯ ಭತ್ತ ಬೆಳೆಯುವದರಿಂದ ಪಡೆಯಬಹುದು. ನೇರ ಬಿತ್ತನೆ ಮಾಡುವದರಿಂದ ಭತ್ತದ ಲಾಭದ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಸಾಗುವಳಿ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಸಾಂಪ್ರದಾಯಿಕ ನೀರಾವರಿ ಭತ್ತದ ಪದ್ಧತಿಗೆ ಹೋಲಿಸಿದರೆ, ಅಕ್ಕಿಯ ರುಚಿಯಲ್ಲಿ ಮತ್ತು ಗುಣಮಟ್ಟದಲ್ಲಿ ಯಾವುದೇ ತರಹದ ಬದಲಾವಣೆ ಇರುವದಿಲ್ಲ ಎಂದು ಹೇಳಿದರು.
ಒಣ ನೇರ ಬಿತ್ತನೆಯ ಭತ್ತವನ್ನು ಬೆಳೆದಿರುವ ರೈತರಾದ ಮಹೇಶ್. ಎಸ್ ಮಾತನಾಡಿ, ನಾನು ಕಿಸಾನ್ ಕ್ರಾಫ್ಟ್ ನ SDSR1014 ಸೋನಾ ಮಸೂರಿಯಂತಹ ಭತ್ತದ ತಳಿಯನ್ನು ಬೆಳೆದಿದ್ದೇನೆ. ಇದು ಇತರೆ ನೀರಾವರಿ ತಳಿಯಷ್ಟೇ ಚೆನ್ನಾಗಿದೆ.. ತೆನೆಗಳು ಹಾಗು ತೊಂಡೆಗಳು ಚೆನ್ನಾಗಿ ಬಂದಿವೆ. ಇದರಲ್ಲಿ ಅತ್ಯುತ್ತಮ ಇಳುವರಿ ಬರುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆಯಿದೆ ಈ ಪದ್ದತಿಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸಿದ ಮತ್ತು ಮಾರ್ಗದರ್ಶನ ನೀಡಿದ ಕಿಸಾನ್ ಕ್ರಾಫ್ಟ್ ಗೆ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಿಸಾನ್ ಕ್ರಾಫ್ಟ್ ನ ಉತ್ಪನ್ನ ಅಭಿವೃದ್ಧಿ ಉದ್ಯೋಗಿಗಳಾದ ಶ್ರೀನಾಥ್, ಹಾಗೂ ವಸೀಮ್ ಅವರು ಭಾಗವಸಿದ್ದರು.
ಅನೇಕ ರೈತ ಮುಖಂಡರು, ಗ್ರಾಮಪಂಚಾಯತಿ ಸದಸ್ಯರು, ಬೀಜ ಹಾಗು ಯಂತ್ರೋಪಕರಣಗಳ ವಿತರಕರು ಭಾಗವಹಿಸಿ ಸಂಪೂರ್ಣ ಮಾಹಿತಿ ಪಡೆದರು.
