ಬೆಂಗಳೂರು: 2026 ರಾಜ್ಯದಲ್ಲಿ ಚುನಾವಣಾ ವರ್ಷವಾಗಿರುವುದರಿಂದ ರಾಜ್ಯದಲ್ಲಿ ಬೇರು ಬಿಟ್ಟಿರುವ ಭ್ರಷ್ಟ ಪಕ್ಷಗಳ ವಿರುದ್ಧ ನಮ್ಮ ಪಕ್ಷದ ಕಾರ್ಯಕರ್ತರು ಜನರ ಜೊತೆಗೂಡಿ ಹೋರಾಡಬೇಕು ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯ ಮಂತ್ರಿ ಚಂದ್ರು ಕರೆ ನೀಡಿದರು.
ಬೆಂಗಳೂರಿನ ಯುವಿಸಿಇ ಹಾಲ್ ನಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು,
ಪ್ರಾಮಾಣಿಕರ ಕೈನಲ್ಲಿ ರಾಜಕೀಯ ಕ್ಷೇತ್ರ ಬರಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಮುಂಬರುವ ಜಿಬಿಎ, ಜಿ.ಪಂ,ತಾ. ಪಂ, ಗ್ರಾ ಪಂ , ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಕಾಲದಲ್ಲಿ ನಡೆಸಲಾಗದೆ ರಾಜ್ಯವನ್ನು ಆಳಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಂವಿಧಾನದ ಅಧಿಕಾರ ವಿಕೇಂದ್ರೀಕರಣ ಸೂತ್ರಕ್ಕೆ ಸಂಪೂರ್ಣ ಕೊಡಲಿ ಪೆಟ್ಟು ನೀಡಿದ್ದಾರೆ ಎಂದು ಟೀಕಿಸಿದರು.
ರಾಜಕೀಯ ಕ್ಷೇತ್ರವನ್ನು ಸಂಪೂರ್ಣ ಪ್ರಭಾವಿಗಳ ,ಭ್ರಷ್ಟರ ಲೂಟಿಕೋರರ ಆಡಂಬೋಲವಾಗಿ ಮಾರ್ಪಾಡು ಮಾಡಿದ್ದಾರೆ. ಜನಸಾಮಾನ್ಯ ಯಾವುದೇ ಕಾರಣಕ್ಕೂ ರಾಜಕೀಯ ಕ್ಷೇತ್ರಕ್ಕೆ ಬಾರದಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯದ ಎಲ್ಲಾ ಪ್ರಾಮಾಣಿಕರಿಗೂ ಚುನಾವಣಾ ರಾಜಕಾರಣದಲ್ಲಿ ಧುಮುಕಿ ಪ್ರಜಾಪ್ರಭುತ್ವವನ್ನು ಉಳಿಸುವ ವೇದಿಕೆಯನ್ನು ಸೃಷ್ಟಿಸಿ ಕೊಟ್ಟಿದೆ. ಎಲ್ಲರೂ ಒಂದಾಗಿ ಪರಂಪರಾನುಗತ ಭ್ರಷ್ಟರನ್ನು ರಾಜಕೀಯ ಕ್ಷೇತ್ರದಿಂದ ತೊಲಗಿಸಬೇಕಾಗಿದೆ ಎಂದು ಕಾರ್ಯಕರ್ತರಿಗೆ ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದು ಅರವಿಂದ್ ಕೇಜ್ರಿವಾಲ್ ಅವರ ಕನಸನ್ನು ನನಸು ಮಾಡಬೇಕಿದೆ ಎಂದು ತಿಳಿಸಿದರು.
ನಮ್ಮ ಪಕ್ಷ ಅನೇಕ ರಾಜ್ಯಗಳಲ್ಲಿ ಸಂಘಟನಾತ್ಮಕವಾಗಿ ಸದೃಢವಾಗಿದೆ. ಈಗಾಗಲೇ ಉತ್ತರ ಪ್ರದೇಶ, ಗೋವಾ, ಗುಜರಾತ್ ನಂತಹ ರಾಜ್ಯಗಳಲ್ಲಿ ಗಣನೀಯ ಸಾಧನೆಯನ್ನು ಮಾಡುತ್ತಿದೆ. ರಾಜ್ಯದಲ್ಲಿಯೂ ಪಕ್ಷವನ್ನು ಮುನ್ನಡೆಸಲು ಸಾವಿರಾರು ಕಾರ್ಯಕರ್ತರುಗಳ ತಂಡ ಇದೆ. ಭವಿಷ್ಯದಲ್ಲಿ ಪಕ್ಷ ಅಧಿಕಾರ ಚುಕ್ಕಾಣಿಯನ್ನು ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ ಪಕ್ಷವು ಎಲ್ಲಾ ಜಿಲ್ಲೆಗಳಲ್ಲಿಯೂ ಸದೃಢವಾಗಿ ,ಸಂಘಟನಾತ್ಮಕವಾಗಿ ಜನತೆಯ ಅಶೋತ್ತರಗಳ ಜೊತೆ ಕೆಲಸ ಮಾಡುತ್ತಿದೆ. ಮುಂಬರುವ ಚುನಾವಣಾ ವರ್ಷದಲ್ಲಿ ಪಕ್ಷವು ಗಣನೀಯ ಸಾಧನೆಯನ್ನು ಮಾಡುತ್ತದೆ. ಈಗಾಗಲೇ ವೇದಿಕೆ ಸಂಪೂರ್ಣ ಸಿದ್ಧವಾಗಿದ್ದು ಸಮಾಜದ ಎಲ್ಲಾ ವರ್ಗಗಳ ಪ್ರಾಮಾಣಿಕ ನಾಯಕರು, ದೇಶಭಕ್ತರು, ಹೋರಾಟಗಾರರು ನಮ್ಮೊಂದಿಗೆ ಕೈಜೋಡಿಸ ಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ,ಸಂಘಟನಾ ಕಾರ್ಯದರ್ಶಿಗಳಾದ ಅರ್ಜುನ್ ಹಲಗಿ ಗೌಡ, ಬಸವರಾಜ ಮುದಿಗೌಡರ್, ಡಾ.ಸತೀಶ್ ಕುಮಾರ್, ರಾಜ್ಯ ಖಜಾಂಚಿ ಪ್ರಕಾಶ್ ನಡುಂಗಡಿ, ಪ್ರಚಾರ ಸಮಿತಿಯ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಸೇರಿದಂತೆ ಅನೇಕ ನಾಯಕರುಗಳು ಉಪಸ್ಥಿತರಿದ್ದರು.
