ಗುಂಡ್ಲುಪೇಟೆ: ಅಂತೂ ಇಂತೂ ಕಡೆಗೂ ಮೂರು ದಶಕಗಳು ಕಳೆದ ಮೇಲೆ ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಕೆ.ಎಸ್. ನಾಗರತ್ನಮ್ಮ ಅವರ ಸಮಾಧಿ ಸ್ಥಳ ಅಭಿವೃದ್ಧಿ ಭಾಗ್ಯ ಕಾಣಲಿದೆ.
ಕೆ.ಎಸ್.ನಾಗರತ್ನಮ್ಮ ಅವರು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಏಳು ಬಾರಿ ಶಾಸಕಿಯಾಗಿ, ಎರಡು ಬಾರಿ ಸಚಿವೆಯಾಗಿ, ವಿರೋಧಪಕ್ಷ ನಾಯಕಿಯಾಗಿ ಗುಂಡ್ಲು ಪೇಟೆ ಕ್ಷೇತ್ರದ ಕೆರೆಗಳ ನಿರ್ಮಾತೃವಾಗಿ ಹಾಗೂ ಕ್ಷೇತ್ರದಲ್ಲಿ ಮಾಡಿದ ಅಪಾರ ಅಭಿವೃದ್ಧಿ ಕೆಲಸಗಳಿಂದಾಗಿ ಇಂದಿಗೂ ಅವರನ್ನು ಜನರು ಪ್ರೀತಿಯಿಂದ ಅಮ್ಮ ಎಂದು ಸ್ಮರಿಸುತ್ತಾರೆ.
ಅವರು ನಿಧನರಾಗಿ 32 ವರ್ಷ ಕಳೆದರೂ ಕಬ್ಬಹಳ್ಳಿಯಲ್ಲಿನ ಅವರ ಸಮಾಧಿ ಈಗಲೂ ಪೊದೆ, ಗಿಡಗಂಟಿಗಳ ನಡುವೆ ದುಸ್ಥಿತಿಯಲ್ಲಿ ರುವುದನ್ನು ನೋಡಿ ಜನ ಮರುಗುತ್ತಿದ್ದರು,ಜತೆಗೆ ತೀವ್ರ ಬೇಸರಗೊಂಡಿದ್ದಾರೆ.
ಕೆ. ಎಸ್. ನಾಗರತ್ಮರವರ ಸ್ಮಾರಕವು ಶಿಥಿಲವಾಗಿರುವುದರಿಂದ ಇದನ್ನು ಅಭಿವೃದ್ಧಿಪಡಿಸಲು 1 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಶಾಸಕ ಎಚ್. ಎಂ. ಗಣೇಶ್ ಪ್ರಸಾದ್ ಸರ್ಕಾರಕ್ಕೆ ಮನವಿ ಮಾಡಿದ್ದರು.
ಇದರ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮ ಇಲಾಖೆ ಮೂಲಕ ಒಂದು ಕೋಟಿ ರೂ. ಅನುದಾನ ನೀಡಿದ್ದಾರೆ.
ಶಾಸಕರ ಕೋರಿಕೆಯಂತೆ ಕೆ. ಎಸ್. ನಾಗರತ್ನಮ್ಮನವರ ಸ್ಥಾರಕವನ್ನು ಅಭಿವೃದ್ಧಿಪಡಿಸಿ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ.ಅಂತೂ ಇಂತೂ ಕೂಡಿ ಬಂತು ಸ್ಮಾರಕ ಅಭಿವೃದ್ಧಿಗೆ ಮುಹೂರ್ತ.
