ಮಣಿಪಾಲ,ಮಾ.1: ಜಾನಪದ ಮಹಿಳಾ ಪ್ರಧಾನವಾದದ್ದು,ಇಂದಿಗೂ ಜಾನಪದದ ಜೀವಂತಿಕೆಗೆ ಮಹಿಳೆಯರೇ ಮುಖ್ಯ ಕಾರಣ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು, ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ.ಜನಪದ ಎಸ್ ಬಾಲಾಜಿ ತಿಳಿಸಿದರು.
ಮಣಿಪಾಲದ ರತ್ನ ಸಂಜೀವ ಕಲಾಮಂಡಲ, ಸರಳೇ ಬೆಟ್ಟು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಮಹಿಳಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಸಂಸ್ಕೃತಿಯ ಮಹತ್ವವನ್ನು ಪ್ರತಿಪಾದಿಸಿದ ಅವರು, ಮಹಿಳೆಯರ ಪಾತ್ರ ಅತ್ಯಂತ ಮುಖ್ಯವೆಂದೂ ಜಾನಪದ ಮಹಿಳಾ ಪ್ರಧಾನವಾದದ್ದು ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ದಶಮಾನೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಮಹಿಳಾ ಘಟಕಗಳನ್ನು ಸ್ಥಾಪಿಸಿ ಮಹಿಳಾ ಜಾನಪದ ಸಬಲೀಕರಣದ ಬಗ್ಗೆ ಒತ್ತು ನೀಡಲಾಗುವುದು ಎಂದು ಡಾ.ಬಾಲಾಜಿ ಭರವಸೆ ನೀಡಿದರು.
ಶಿವರಾಮ ಕಾರಂತ ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಗಣನಾಥ್ ಎಕ್ಕಾರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಪ್ರತಿ ಹಂತದಲ್ಲೂ ಜಾನಪದ ಸಂವರ್ಧನೆಯಲ್ಲಿ ಕೊಡುಗೆ ನೀಡಿದ್ದಾರೆ, ಜಾನಪದ ಜಾಗೃತಿ ಮೂಡಿಸುವುದರಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ರಚಿಸುವ ಮೂಲಕ ಮಹಿಳೆಯರಲ್ಲಿ ಜಾನಪದ ಜಾಗೃತಿ ಮೂಡಿಸುತ್ತಿರುವುದು ಅನುಕರಣಿಯ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ರಾಜ್ಯ ಸಂಚಾಲಕಿ ಡಾ ಭಾರತಿ ಮರವಂತೆ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮಹಿಳಾ ಜಾನಪದ ಸಮ್ಮೇಳನವನ್ನು ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ಮೇ ತಿಂಗಳಲ್ಲಿ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ವಿದುಷಿ ಗೀತಾ ಹೆಬ್ಬಾರ್, ಕಾರ್ಯದರ್ಶಿಯಾಗಿ ಪ್ರಭ ಹಾಗೂ ಇತರೆ 11 ಜನ ಸದಸ್ಯರು ಕನ್ನಡ ಜಾನಪದ ಪರಿಷತ್ ರಾಜ್ಯ ಸಂಚಾಲಕಿ ಡಾ ಭಾರತಿ ಮರವಂತೆ ಅವರಿಂದ ಪದಪತ್ರ ಸ್ವೀಕರಿಸಿದರು.
ಎಲ್ಲಾ ಪದಾಧಿಕಾರಿಗಳಿಗೆ ಡಾ ಭಾರತಿ ಮರವಂತೆ ಜಾನಪದ ಪ್ರತಿಜ್ಞಾವಿಧಿ ಬೋಧಿಸಿದರು.
ಇದೇ ವೇಳೆ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮಹೇಶ್ ಠಾಕೂರ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಪುತ್ತಿಗೆ ಮಠದ ದಿವಾನರು ನಾಗರಾಜ್ ಆಚಾರ್ಯ, ಮಾಜಿ ಕೌನ್ಸಿಲರ್ ನರಸಿಂಹ ನಾಯಕ್, ರಮಾನಂದ ಸಾಮಂತ, ರಾಘವೇಂದ್ರ ಕರ್ವಾಲ್, ಕೌಶಿಕ್ ಮತ್ತಿತರ ಜಾನಪದ ಅಭಿಮಾನಿಗಳು ಪಾಲ್ಗೊಂಡಿದ್ದರು.
