ಮೈಸೂರು: ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ
ಸಿಡಬ್ಲ್ಯುಆರ್ ಸಿ ಹೇಳಿಕೆಯಿಂದ ರಾಜ್ಯದಲ್ಲಿ ಕೋಲಾಹಲ ಉಂಟಾಗಿದೆ ಕನ್ನಡಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳು ರಾಜ್ಯದಾದ್ಯಂತ ಹೋರಾಟ ಆರಂಭಿಸಿದೆ
ಸರ್ಕಾರ ಈಗಾಗಲೇ ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ.
ಈ ಸಂದರ್ಭದಲ್ಲಿ CWRC ತಮಿಳುನಾಡಿಗೆ ನೀರು ಬಿಡುವಂತೆ ಹೇಳಿರುವುದು ಸರಿಯಲ್ಲ ಕೆಆರ್ಎಸ್ ನಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದು, ಕುಡಿಯುವ ನೀರಿನ ಭದ್ರತೆ ಹಾಗೂ ರೈತರ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ಸಂಕಷ್ಟದ ಸಮಯದಲ್ಲೂ ಪ್ರತಿದಿನ ಸುಮಾರು 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ನೀಡಿರುವ ಆದೇಶವು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ.
ಇಂತಹ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಾಸಕರು ಮತ್ತು ಲೋಕಸಭಾ ಸದಸ್ಯರು ಪಕ್ಷಾತೀತವಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಬೇಕು ಅಗತ್ಯ ಬಂದಲ್ಲಿ ಕನ್ನಡಿಗರ ಹಿತಾಸಕ್ತಿಗಾಗಿ ರಾಜೀನಾಮೆ ನೀಡಲು ಸಹ ಮುಂದಾಗಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ
ಕಾವೇರಿ ನೀರನ್ನೇ ಅವಲಂಬಿಸಿರುವ ಬೆಂಗಳೂರು ಮಹಾನಗರ, ಮೈಸೂರು, ಮಂಡ್ಯ, ರಾಮನಗರ ಹಾಗೂ ಇತರೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತದೆ ಎಂದಿದ್ದಾರೆ
ರೈತರ ಬೆಳೆ, ಸಾರ್ವಜನಿಕರ ಜೀವನ ಹಾಗೂ ರಾಜ್ಯದ ನೀರಿನ ಭದ್ರತೆಯನ್ನು ಕಡೆಗಣಿಸಿ ಯಾವುದೇ ನಿರ್ಧಾರಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬಾರದು ಕಾವೇರಿ ನೀರಿನ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್, ಬಂಗಾರಪ್ಪ ಅವರ ದಿಟ್ಟ ತನವನ್ನು ಈಗಿನ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರದರ್ಶಿಸುವಂತೆ
ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡುವ ಕರ್ನಾಟಕ ಬಂದ್ ಗೆ ಕನ್ನಡ ಕ್ರಾಂತಿದಳ ಸಂಘಟನೆಯು ಸಂಪೂರ್ಣ ಬೆಂಬಲ ನೀಡಲಿದೆ ಎಂದು ತೇಜಸ್ವಿ ಹೇಳಿದ್ದಾರೆ.
