ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಇರುವ ಕಾವೇರಿ ನದಿ ದಡದಲ್ಲಿ ಉಡ ಮಾರಾಟಕ್ಕೆ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರಿ ದಳ ಬಂಧಿಸಿದೆ.
ಬಂಧಿತ ಆರೋಪಿಗಳು ಹುಣಸೂರಿನ ಸರ್ದಾರ್ ಅಲಿಯಾಸ್ ಮುಕ್ತಾರ್ ಪಾಶ (45) ಹಾಗೂ ರಫೀ ಆಲಿಯಾಸ್ ಗನ್ನಿ (44) ಬಂಧಿತ ಆರೋಪಿಗಳು.
ಆರೋಪಿಗಳಿಂದ ಉಡವನ್ನು ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡಿದೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಕಾವೇರಿ ನದಿ ದಡದಲ್ಲಿ ಉಡವನ್ನು ಹಿಡಿದು ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಜೂನ್ 3ರಂದು ಕಾವೇರಿ ನದಿ ದಡದ ಬಳಿ ಪರಿಶೀಲಿಸಲಾಯಿತು.
ಅಲ್ಲಿ ಇಬ್ಬರು ವ್ಯಕ್ತಿಗಳು ರಟ್ಟಿನಿಂದ ಸುತ್ತಿರುವ ಕಬ್ಬಿಣದ ಪಂಜರ ಸಮೇತ ಒಂದು ಜೀವಂತ ಉಡವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದುದ್ದು ಕಂಡು ಬಂದಿದೆ.
ತಕ್ಷಣ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಉಡವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪೊಲೀಸ್ ಮಹಾನಿರೀಕ್ಷಕರು ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್ ನೆಜ್ಜೂರು, ಅವರ ಮಾರ್ಗದರ್ಶನದಲ್ಲಿ ಕೊಳ್ಳೆಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್ ಹಾಗೂ ಸಿಬ್ಬಂದಿ ಬಸವರಾಜ್, ಸ್ವಾಮಿ, ಜಮೀಲ್, ಲತಾ, ರಾಮಚಂದ್ರ, ಪ್ರಭಾಕರ್ ಮತ್ತು ಬಸವರಾಜ್ ಪಾಲ್ಗೊಂಡಿದ್ದರು.
