ಮೈಸೂರು: ರಾಜ್ಯದ ಸಾರಿಗೆ ಬಸ್ಗಳ ಮೇಲೆ ಪ್ರಾಣಿಗಳ ಮೇಲೆ ದಯೆ ಇರಲಿ ಎಂಬ ಸಂದೇಶವನ್ನು ಬರೆದಿರುವುದನ್ನು ನೋಡುತ್ತಿದ್ದೇವೆ. ಪ್ರಾಣಿಗಳ ಮೇಲೆ ದಯೆ ತೋರುವಂತೆ ಜಾಗೃತಿ ಮೂಡಿಸುವ ಸಾರಿಗೆ ಸಂಸ್ಥೆಗಳು, ಅದೇ ರೀತಿಯ ಕಾಳಜಿಯನ್ನು ಪ್ರಯಾಣಿಕರ ಮೇಲೂ ತೋರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಮನವಿ ಮಾಡಿದ್ದಾರೆ.
ಪ್ರಯಾಣ ದರ ಏರಿಕೆಯಿಂದಾಗಿ ಈಗಾಗಲೇ ಬೆಲೆ ಏರಿಕೆಯ ಬಿಸಿಯಲ್ಲಿ ತತ್ತರಿಸುತ್ತಿರುವ ಬಡವರು, ಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ನೌಕರರು ಜನಸಾಮಾನ್ಯರು ದಿನನಿತ್ಯ ಬಸ್ಗಳನ್ನು ಅವಲಂಬಿಸಿದ್ದು,ಅವರಿಗೆ ಆರ್ಥಿಕ ಹೊರೆ ಉಂಟಾಗುತ್ತದೆ.
ಸಾರಿಗೆ ಸಂಸ್ಥೆಗಳು ಸಾರ್ವಜನಿಕರ ಸೇವೆಗಾಗಿ ಕಾರ್ಯನಿರ್ವಹಿಸಬೇಕೇ ಹೊರತು, ಜನಸಾಮಾನ್ಯರ ಜೇಬಿಗೆ ಪದೇಪದೇ ಕತ್ತರಿ ಹಾಕುವಂತಾಗಬಾರದು.
ಇಂಧನ ದರ, ನಿರ್ವಹಣಾ ವೆಚ್ಚ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರಯಾಣ ದರ ಹೆಚ್ಚಿಸುವುದರಿಂದ ಸಾಮಾನ್ಯ ಜನರ ಜೀವನ ನಿರ್ವಹಣೆ ಮತ್ತಷ್ಟು ಕಷ್ಟಕರವಾಗಲಿದೆ.
ಬಸ್ಸಿನ ಮೇಲೆ “ಪ್ರಾಣಿಗಳ ಮೇಲೆ ದಯೆ ಇರಲಿ” ಎಂದು ಬರೆಯುವ ಸಾರಿಗೆ ಸಂಸ್ಥೆಗಳಿಗೆ ನಮ್ಮದೊಂದು ಕಳಕಳಿಯ ಮನವಿ;ಪ್ರಾಣಿಗಳ ಮೇಲಿನ ದಯೆಯ ಜೊತೆಗೆ ಪ್ರಯಾಣಿಕರಾದ ಮನುಷ್ಯರ ಮೇಲೂ ದಯೆ ಇರಲಿ. ಪದೇಪದೇ ಪ್ರಯಾಣ ದರ ಏರಿಸಿ ಜನಸಾಮಾನ್ಯರ ಬದುಕಿಗೆ ಹೊರೆಯಾಗಿಸಬೇಡಿ,ಅವರ ಮೇಲೆ ಬರೆ ಎಳೆಯಬೇಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಯಾಣ ದರ ಏರಿಕೆ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
