ಢಾಕಾ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್ಪಿ ಭರ್ಜರಿ ಜಯಗಳಿಸಿದ್ದು,ಪಕ್ಷದ ನಾಯಕ ತಾರಿಕ್ ರೆಹಮಾನ್ ಪ್ರಧಾನಿ ಪಟ್ಟಕ್ಕೇರಲಿದ್ದಾರೆ.
ಫೆ.17ರಂದು ನಡೆಯಲಿರುವ ಸಮಾರಂಭದಲ್ಲಿ ತಾರಿಕ್ ಅವರು
ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹೊಸ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನ ಬಂದಿದೆ.ಭಾರತ,ಪಾಕಿಸ್ತಾನ ಸೇರಿ 13 ದೇಶಗಳನ್ನು ಈ ಸಮಾರಂಭಕ್ಕೆ ಬಾಂಗ್ಲಾ ಆಹ್ವಾನಿಸಿದೆ.
ಬಾಂಗ್ಲಾದೇಶದ 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಿಗೆ ಗುರುವಾರ 13ನೇ ಸಂಸತ್ ಚುನಾವಣೆ ನಡೆದಿದ್ದು, ಎರಡು ಸ್ಥಾನಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಬಿಎನ್ಪಿ ಭರ್ಜರಿ ಜಯ ಸಾಧಿಸಿ, ಘೋಷಿತ 297 ಸ್ಥಾನಗಳಲ್ಲಿ 209 ಸ್ಥಾನಗಳನ್ನು ಗೆದ್ದು ಬೀಗಿದೆ.
ಪಾಕಿಸ್ತಾನಕ್ಕೆ ಹತ್ತಿರವೆಂದು ಪರಿಗಣಿಸಲಾದ ಬಲಪಂಥೀಯ ಜಮಾತ್-ಇ-ಇಸ್ಲಾಮಿ 68 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಗಿತ್ತು.
