ಮೈಸೂರು: ಇನ್ನು ಹತ್ತು ದಿನದಲ್ಲಿ ಸರ್ಕಾರ ನಿಗದಿ ಮಾಡಿರುವ ಕಬ್ಬು ಹೆಚ್ಚುವರಿ ದರ ರೈತರ ಖಾತೆಗೆ ಜಮೆ ಆಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಭರವಸೆ ನೀಡಿದರು.
ಕಬ್ಬು ಬೆಳೆಗಾರರು, ರೈತ ಮುಖಂಡರು, ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಗಳು ಈ ಭರವಸೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಬಣ್ಣಾರಿ ಕಾರ್ಖಾನೆಯವರು ಕಬ್ಬಿನಿಂದ ಬರುವ ಉಪ ಉತ್ಪನ್ನಗಳನ್ನು ಇವರ ಮಾಲೀಕತ್ವದಲ್ಲಿರುವ ಬೇರೆ ಬೇರೆ ಹೆಸರಿನಲ್ಲಿ ಸ್ಥಾಪಿಸಿರುವ ಕಂಪನಿಗಳಿಗೆ ಪೂರೈಕೆ ಮಾಡುತ್ತಿರುವುದರಿಂದ ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭ ಇಲ್ಲ ಎಂದು ಲೆಕ್ಕ ತೋರಿಸುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಕ್ಕರೆ ಇಳುವರಿಯಲ್ಲಿಯೂ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಲಾಭವನ್ನು ಹಂಚಿಕೆ ಮಾಡದೆ ಇರುವ ಬಗ್ಗೆ ಸರ್ಕಾರಕ್ಕೆ ವರದಿ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕು, ಕೂಡಲೇ ಸರ್ಕಾರ ನಿಗದಿ ಮಾಡಿರುವ ಹಣ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು, ಕಬ್ಬಿಗೆ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ನೂರು ರೂಪಾಯಿ ಬಾಪ್ತು 10 ದಿನದಲ್ಲಿ ಹಣ ಬಿಡುಗಡೆಯಾಗಲಿದೆ,ಅದರ ಜೊತೆಯಲ್ಲಿ ಬಣ್ಣಾರಿ ಕಾರ್ಖಾನೆ ಟನ್ನಿಗೆ ಐವತ್ತು ರುಪಾಯಿ ಸೇರಿಸಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.
ಸರ್ಕಾರ ಈಗಾಗಲೇ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಮುಂದಿನ ವರ್ಷದಿಂದ ರೈತರ ಕಬ್ಬು ಕಟಾವು ನೋಂದಣಿ ಆದ್ಯತೆಯ ಪಟ್ಟಿ ಪ್ರತಿ ತಿಂಗಳು ಬಿಡುಗಡೆ ಮಾಡಿ ಅದರಂತೆ ಕಬ್ಬು ಕಟಾವು ಮಾಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಏಳುವರೆ ಲಕ್ಷ ಟನ್ ಕಬ್ಬು ಅರೆದಿದೆ. ನಮಗೆ ವರ್ಷಕ್ಕೆ 15 ಲಕ್ಷ ಟನ್ ಕಬ್ಬು ಬೇಕು ಎಂದು ಕಾರ್ಖಾನೆ ಉಪಾಧ್ಯಕ್ಷ ವೇಲುಸ್ವಾಮಿ ಸಭೆಯಲ್ಲಿ ತಿಳಿಸಿದರು.
ಕಬಿನಿ ಜಲಾಶಯದಲ್ಲಿ 75 ಅಡಿ ನೀರಿದೆ ಕೆರೆಕಟ್ಟೆ ತುಂಬಿಸಲು ದನ ಕರು ಕುಡಿಯಲು, ನೀರು ನಾಲೆಗಳಲ್ಲಿ ಹರಿಸುವಂತೆ ಸಭೆಯಲ್ಲಿ ರೈತರು ಒತ್ತಾಯ ಮಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮಾತನಾಡಿ ಒಂದು ವಾರದಲ್ಲಿ ನೀರಾವರಿ ಸಲಹಾ ಸಮಿತಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಪೊಲೀಸ್ ಉಪ ಆಧೀಕ್ಷಕ ಮಲ್ಲಿಕ್, ಜಂಟಿ ಕೃಷಿ ನಿರ್ದೇಶಕ ರವಿ, ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕರು, ರೈತ ಮುಖಂಡ ಹತ್ತಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಸೋಮಶೇಖರ್, ಕಿರುಗಸೂರು ಶಂಕರ್, ಬರ್ಡನಾಪುರ ನಾಗರಾಜ್. ಲಕ್ಷ್ಮಿಪುರ ವೆಂಕಟೇಶ್. ಕೆ ಆರ್ ನಗರ ತಿಮ್ಮಪ್ಪ. ಕುರುಬೂರು ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು.
