ಬೆಂಗಳೂರು: ಜನರನ್ನು ಯಾಮಾರಿಸುವುದು, ಮನಬಂದಂತೆ ಬೆಲೆ ಏರಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಎರಡು ತತ್ವಗಳು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಛೇಡಿಸಿದ್ದಾರೆ.
ಹಾಲಿನ ದರ ಏರಿಕೆ, ಮೊಸರಿನ ದರ ಏರಿಕೆ, ಈಗ ನವೆಂಬರ್ 5 ರಿಂದ ಬಸ್ ಪ್ರಯಾಣ ದರ ಏರಿಕೆ! ಇದೇನಾ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ಎಂದು ಅಶೋಕ ಟ್ವೀಟ್ ಮಾಡಿ ಖಾರವಾಗಿ ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಹೆಸರಿನಲ್ಲಿ ಒಂದು ಕೈಯಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿ, ಮತ್ತೊಂದು ಕೈಯಲ್ಲಿ ಪುರುಷರು ಸೇರಿದಂತೆ ಇಡೀ ಕುಟುಂಬದ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದೀರಿ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಸಚಿವ ಬೈರತಿ ಸುರೇಶ್ ಅವರೇ, ರಾಜ್ಯದ ಜನರು ನಿಮ್ಮ ಗ್ಯಾರಂಟಿಗಳ ಬೆಲೆ ತೆರಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಹಾಲಿನ ದರ ಹೆಚ್ಚಳ,ಬಸ್ ಪ್ರಯಾಣ ದರ ಹೆಚ್ಚಳ,ವಿದ್ಯುತ್ ದರ ಹೆಚ್ಚಳ,ಕುಡಿಯುವ ನೀರಿನ ದರ ಹೆಚ್ಚಳ,ಆಸ್ತಿ ತೆರಿಗೆ ಹೆಚ್ಚಳ,
ಅಗತ್ಯ ವಸ್ತುಗಳ ಬೆಲೆ ಏರಿಕೆ
ತೆರಿಗೆಗಳ ಹೊರೆ ಹೆಚ್ಚಳ.
ಹೀಗೆ ಯಾವುದನ್ನೂ ಬಿಡದೆ ಜನಸಾಮಾನ್ಯರ ಬದುಕನ್ನು ದುಬಾರಿಯಾಗಿ ಸುತ್ತಿರುವುದೇ ನಿಮ್ಮ ಸಾಧನೆಯೇನು ಎಂದು ಕುಟುಕಿದ್ದಾರೆ.
ಈಗಾಗಲೇ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು 9,000 ಕೋಟಿಗೂ ಅಧಿಕ ನಷ್ಟದಲ್ಲಿವೆ ಎಂದು ಹೇಳುತ್ತಿರುವ ಸರ್ಕಾರ, ಆ ನಷ್ಟಕ್ಕೆ ತನ್ನ ಆರ್ಥಿಕ ನಿರ್ವಹಣೆಯ ವೈಫಲ್ಯವನ್ನು ಮರೆಮಾಚಿ ಜನರ ಮೇಲೆಯೇ ಹೊರೆ ಹೊರಿಸುತ್ತಿದೆ. ಡೀಸೆಲ್ ಬೆಲೆ ಏರಿಕೆಯ ನೆಪ ಹೇಳುವ ಮೊದಲು, ನಿಮ್ಮ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳಿಗೆ ಉತ್ತರ ಕೊಡಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ಕೈಯಲ್ಲಿ ಇಲ್ಲದ ಕಾಸಿಗೆ ಜಾತ್ರೆ ಮಾಡಿದರಂತೆ’ ಎಂಬಂತೆ, ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕತೆಯನ್ನು ದಿವಾಳಿಯ ಅಂಚಿಗೆ ತಳ್ಳಿದ ಕಾಂಗ್ರೆಸ್ ಸರ್ಕಾರ, ಈಗ ಆ ಹೊರೆಯನ್ನು ಜನರ ಜೇಬಿನಿಂದ ವಸೂಲಿ ಮಾಡುತ್ತಿದೆ. ಜನರಿಗೆ ಬೇಕಿರುವುದು ಬೆಲೆ ಏರಿಕೆಯ ಗ್ಯಾರಂಟಿಯಲ್ಲ, ಬದುಕಿಗೆ ನೆಮ್ಮದಿಯ ಗ್ಯಾರಂಟಿ. ಈ ಸರ್ಕಾರಕ್ಕೆ ಜನರ ಜೇಬು ತುಂಬಿಸುವುದು ಬೇಕಿಲ್ಲ, ಖಾಲಿ ಮಾಡಿಸುವುದೇ ಗ್ಯಾರಂಟಿಯಾಗಿದೆ.
ಜನವಿರೋಧಿ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಿ. ಇಲ್ಲದಿದ್ದರೆ ಜನರ ಪರವಾಗಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಅಶೋಕ ಎಚ್ಚರಿಸಿದ್ದಾರೆ
