ಮೈಸೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿ 6 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಈಡುಗಾಯಿ ಹೊಡೆದು ಸಿಹಿ ಹಂಚಿದ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಜಿ. ಶ್ರೀನಾಥ್ ಬಾಬು ನಮ್ಮ ನೆಚ್ಚಿನ ನಾಯಕರೂ, ಸಂಘಟನೆಯ ಚತುರರಾದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪಕ್ಷದ ಸಂಘಟನೆ ಮತ್ತು ಪುನಶ್ವೇತನ ಮಾಡಿದ್ದಾರೆ ಎಂದು ಹೇಳಿದರು.
ಕೋವಿಡ್ 19 ಸಮಯದಲ್ಲಿ ಜನಸೇವೆ, ಮೇಕೆದಾಟು ಪಾದಯಾತ್ರೆ, ಒಗ್ಗಟ್ಟಿನ ಮಂತ್ರ, ಭಾರತ್ ಜೋಡೋ ಯಾತ್ರೆ, ವಿಧಾನಸಭೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ, ಐದು ಗ್ಯಾರಂಟಿಗಳ ಜಾರಿ, 100 ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣ ಸೇರಿದಂತೆ ಅನೇಕ ಯಶಸ್ವಿ ಸಾಧನೆಗಳ ಹಿಂದೆ ಡಿಕೆಶಿ ಅವರು ಇದ್ದಾರೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ವಿಶ್ವಾಸವಿದೆ ಎಂದು ಜಿ. ಶ್ರೀನಾಥ್ ಬಾಬು ಹೇಳಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ, ಅಖಿಲ ಕರ್ನಾಟಕ ಡಿ.ಕೆ ಶಿವಕುಮಾರ್ ಅಭಿಮಾನಿ ಸಂಘದ ನಗರ ಅಧ್ಯಕ್ಷ ಜಿ ರಾಘವೇಂದ್ರ, ನಗರ ಪಾಲಿಕೆ ಮಾಜಿ ಸದಸ್ಯ ರಾಜಶೇಖರ ಮೂರ್ತಿ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಎಸ್ ಎನ್ ರಾಜೇಶ್, ಮಂಜೇಶ್, ಜಿ ಕಿರಣ, ರಮೇಶ. ರಾಕೇಶ್. ಮುಶಿ. ಆರ್ ಯೋಗೇಶ್, ಶ್ರೀಧರ್, ಬೋಗಾದಿ ಚಂದ್ರು, ಮಹೇಶ್, ಲಕ್ಷ್ಮಣ, ರಂಜು, ವಿಜೇಂದ್ರ ಮತ್ತಿತರರು ಹಾಜರಿದ್ದರು.
