ಮೈಸೂರು: ಕನ್ನಡ ಚಿತ್ರರಂಗದ ಧ್ರುವತಾರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಸಿಹಿಯನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ.ಬಿ. ಲಿಂಗರಾಜು ಅವರು, “ಪುನೀತ್ ರಾಜಕುಮಾರ್ ಅವರು ಕೇವಲ ನಟರಾಗಿರಲಿಲ್ಲ, ಅವರು ಕೋಟ್ಯಂತರ ಕನ್ನಡಿಗರ ಪಾಲಿನ ಶಕ್ತಿಯಾಗಿದ್ದರು. ಅವರ ಸರಳತೆ ಮತ್ತು ಸಮಾಜಮುಖಿ ಚಿಂತನೆಗಳು ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಹೇಳಿದರು.
ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸಿ. ಸಂದೀಪ್ ಮಾತನಾಡಿ, ಪುನೀತ್ ರಾಜಕುಮಾರ್ ಅವರು ಮಾಡಿರುವ ಸೇವಾ ಕಾರ್ಯಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ. ಅವರ ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸ್ಪೂರ್ತಿ ದಿನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜನಸಾಮಾನ್ಯರು ಅಪ್ಪು ಹಾದಿಯಲ್ಲಿ ನಡೆದು ಆರೋಗ್ಯ ಶಿಬಿರ, ರಕ್ತದಾನ, ನೇತ್ರದಾನ, ಸಾಮೂಹಿಕ ವಿವಾಹ ಹಾಗೂ ಅನ್ನದಾಸೋಹದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರ ಕಾಳಜಿ ಮತ್ತು ಕನ್ನಡ ಭಾಷೆಗಾಗಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ, ಎಂದು ಹೇಳಿದರು.
ಇದೇ ವೇಳೆ ಸಾರ್ವಜನಿಕರಿಗೆ ತಂಪು ಮಜ್ಜಿಗೆ ಮತ್ತು ಸಿಹಿ ಹಂಚಿ ಅಪ್ಪು ನೆನಪನ್ನು ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಅಪೂರ್ವ ಸುರೇಶ್, ರಾಜಣ್ಣ, ಜೋಗಿ ಮಂಜು, ವಿಕ್ರಂ, ಅಂಬಳೆ ಶಿವಣ್ಣ, ಬಸವರಾಜು ಪುರುಷೋತ್ತಮ್, ರಾಜೇಂದ್ರ , ಪ್ರಭುಶಂಕರ್, ಗುರುಸ್ವಾಮಿ, ಪ್ರಕಾಶ್ , ಮೋಹನ್, ಗೋಪಾಲ್ ರಾಜ ಅರಸ್, ನಾಗೇಂದ್ರ, ಚಂದ್ರಶೇಖರ್, ಭಾನು ಕುಮಾರ್, ವಿನಯ್, ಪವನ್, ಧನುಷ್, ಚೇತನ್ ಮತ್ತಿತರ ಅನೇಕ ಅಭಿಮಾನಿಗಳು ಹಾಜರಿದ್ದರು.
