ಬೆಳಗಾವಿ: ಕಾನೂನು ಬಾಹಿರವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವ ಆರೋಪದ ಮೇಲೆ ಬೆಳಗಾವಿ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ನನ್ನು ಬಂಧಿಸಲಾಗಿದೆ.
ಶಿವಾನಂದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು ಜಿಲ್ಲಾಡಳಿತ ಅವರನ್ನು ಬಂಧಿಸಿದೆ.
ಶಿವಾನಂದ ನೀಲಣ್ಣವರ ಅವರ ಮನೆ, ಕಚೇರಿ ಹಾಗೂ ವಿವಿಧ ಸ್ಥಳಗಳ ಮೇಲೆ ಗುರುವಾರ ದಾಳಿ ಆರಂಭಿಸಿ, ಶುಕ್ರವಾರ ಕೂಡ ಇಡೀ ದಿನ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತು.
ತಡರಾತ್ರಿ ಶಿವಾನಂದ ಅವರನ್ನು ಕರೆದೊಯ್ದ ನಗರ ಪೊಲೀಸರು ವಿಚಾರಣೆ ನಡಸಿ ರಾತ್ರಿಯೇ ಪ್ರಕರಣ ದಾಖಲಿಸಿ, ಶಿವಬಸವ ನಗರದ ಮನೆಯಿಂದ ಅವರನ್ನು ವಶಕ್ಕೆ ಪಡೆದರು.
ಶನಿವಾರ ಮಾಳಮಾರುತಿ ಪೊಲೀಸ್ ಠಾಣೆಗೆ ಶಿವಾನಂದ ನೀಲಣ್ಣವರ ನನ್ನು ಕರೆದೊಯ್ದು ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಸಲಾಗಿದೆ.
ಅಕ್ಯೂಮೆನ್ ಎಂಬ ಆ್ಯಪ್ ಅಭಿವೃದ್ಧಿಪಡಿಸಿ, ಅದರ ಮೂಲಕ ಜನರಿಂದ ಹಣ ಹೂಡಿಕೆ ಮಾಡಿಕೊಳ್ಳಲು ಶಿವಾನಂದ ಆರಂಭಿಸಿದ್ದರು. ಈ ಆ್ಯಪ್ ಮೂಲಕ ಸಾವಿರಾರು ಕೋಟಿ ಹೂಡಿಕೆಯಾಗಿದೆ ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಸಿಕ್ಕಿದೆ.
ಅವರು ಸಂಗ್ರಹಿಸಿರುವ ಹಣದ ಕುರಿತು ಇನ್ನೂ ಅಧಿಕೃತ ಮಾಹಿತಿ ಗೊತ್ತಾಗಿಲ್ಲ,ಆದರೆ 4500 ಕೋಟಿ ರೂ. ಇರಬಹುದು ಎಂದು ಹೇಳಲಾಗುತ್ತಿದೆ.
ಈ ಪ್ರಕರಣ ಬೆಳಗಾವಿಯಲ್ಲಿ ಭಾರೀ ಚರ್ಚೆಗೆ ಗ್ರಾಸ ಒದಗಿಸಿದೆ. ಇಷ್ಟು ದೊಡ್ಡ ವ್ಯವಹಾರ ಬಹಳ ದಿನದಿಂದ ನಡೆಯುತ್ತಿದ್ದರೂ ಯಾವುದೇ ಸುದ್ದಿ ಹೊರಗೆ ಬಂದಿರಲಿಲ್ಲ, ಸಾವಿರಾರು ಕೋಟಿ ಹಣದ ವ್ಯವಹಾರ ನಡೆದರೂ ಸಂಬಂಧಿಸಿದ ಕೇಂದ್ರ, ರಾಜ್ಯ ಸರಕಾರದ ಇಲಾಖೆಗಳಿಗೆ ಗೊತ್ತೇ ಆಗಲಿಲ್ಲವೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
