ಮೈಸೂರು: ಮನೆಗಳಿಂದ ಕಸ ಸಂಗ್ರಹಿಸುವ ಮುನ್ನವೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಪೌರಕಾರ್ಮಿಕರಿಗೆ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ. ಶಂಕರ ಅಂಕನಶೆಟ್ಟಿಪುರ ಸೂಚಿಸಿದರು.
ಮೈಸೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ನಂತರ ಮಾತನಾಡಿದರು.
ಕಸ ಸಂಗ್ರಹ ವಾಹನದ ಚಾಲಕರು ಮತ್ತು ಸಹಾಯಕರು ಕೂಡ ಸ್ವಚ್ಛತಾ ಕಾರ್ಯದ ಪ್ರಮುಖ ಭಾಗವಾಗಿದ್ದಾರೆ. ಅವರಿಗೆ ಸಿಗುತ್ತಿರುವ ವೇತನ ಕಡಿಮೆ ಇದೆ, ವೇತನ ಹೆಚ್ಚಳ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಪೌರಕಾರ್ಮಿಕರ ಮಕ್ಕಳೂ ಪೌರಕಾರ್ಮಿಕರಾಗಬೇಕು ಎಂಬ ಮನೋಭಾವ ತೊಲಗಬೇಕು. ಪೌರಕಾರ್ಮಿಕರು, ಒಳಚರಂಡಿ ಕಾರ್ಮಿಕರು, ವಾಹನ ಚಾಲಕರು ಮತ್ತು ಸಹಾಯಕರ ಮಕ್ಕಳ ಶಿಕ್ಷಣದ ಮಾಹಿತಿಯನ್ನು ಪರಿಸರ ಅಭಿಯಂತರರಿಂದ ಪಡೆದು ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸಬೇಕು. ಪಾಲಿಕೆಯ ಅನುದಾನ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸೌಲಭ್ಯಗಳನ್ನು ಒದಗಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಿ. ಶಂಕರ ಅಂಕನಶೆಟ್ಟಿಪುರ ಸಲಹೆ ನೀಡಿದರು.
ಖಾಯಂ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ನಿವೇಶನ ಮತ್ತು ಮನೆ ನೀಡಲಾಗುತ್ತಿದೆ. ನೇರ ಪಾವತಿ, ಒಳಚರಂಡಿ ಕಾರ್ಮಿಕರು, ಲೋಡರ್, ಕ್ಲೀನರ್ ಮತ್ತು ಚಾಲಕರೂ ಕೂಡಾ ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ನಗರದ ಸ್ವಚ್ಛತೆಗೆ ಶ್ರಮಿಸುತ್ತಾರೆ. ಅವರಿಗೂ ರಾಜೀವ್ ಗಾಂಧಿ ವಸತಿ ನಿಗಮ ಅಥವಾ ಇತರೆ ವಸತಿ ಯೋಜನೆಗಳಡಿ ಮನೆ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಶಾಲೆಗೆ ಸೇರಿದ ದಿನದ ನೆನಪಿಗಾಗಿ ನವೆಂಬರ್ 7 ರಂದು ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸುವಂತೆ ಅಧಿಕಾರಿಗಳಿಗೆ ಸಿ.ಶಂಕರ್ ಆದೇಶಿಸಿದರು.
ಪೌರಕಾರ್ಮಿಕರು ಮತ್ತು ಚಾಲಕರಿಗೆ ಮೇಸ್ತ್ರಿ ಅಥವಾ ಅಧಿಕಾರಿಗಳು ಕಿರುಕುಳ ನೀಡಿದರೆ ಪಾಲಿಕೆ ಆಯುಕ್ತರಿಗೆ ದೂರು ನೀಡಬಹುದು. ಅಲ್ಲಿ ಪರಿಹಾರ ಸಿಗದಿದ್ದರೆ ಆಯೋಗ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಮಾತನಾಡಿ, ಕಾರ್ಮಿಕರ ಕುಂದುಕೊರತೆಗಳಿಗೆ ‘ಸಿಂಗಲ್ ವಿಂಡೋ’ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ ಪರಿಸರ ಅಭಿಯಂತರರು ಮತ್ತು ಆರೋಗ್ಯ ನಿರೀಕ್ಷಕರಿಗೆ ದೂರು ನೀಡಬಹುದು. ಅಲ್ಲಿ ಬಗೆಹರಿಯದಿದ್ದರೆ ಹೆಚ್ಚುವರಿ ಆಯುಕ್ತರ ಹಂತದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆಯೋಗದ ಸಂಶೋಧನಾಧಿಕಾರಿ ಮಹದೇವಸ್ವಾಮಿ, ಕಾರ್ಯದರ್ಶಿ ರಘು, ರಾಜೇಂದ್ರ, ಪಾಲಿಕೆ ಉಪ ಆಯುಕ್ತೆ ವೀಣಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
