ಮೈಸೂರು: ಅಯೋಧ್ಯೆಯ ಶ್ರೀರಾಮ ಮಂದಿರದ ಬಾಲರಾಮನ ದಿವ್ಯ ವಿಗ್ರಹವನ್ನು ಕೆತ್ತುವ ಮೂಲಕ ವಿಶ್ವದ ಗಮನ ಸೆಳೆದಿರುವ ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟಿಸಬೇಕೆಂದು ಸಮಾಜ ಸೇವಕರಾದ ರಿಷಿ ವಿಶ್ವಕರ್ಮ ಅವರು ಮನವಿ ಮಾಡಿದ್ದಾರೆ
ತಮ್ಮ ಅಪೂರ್ವ ಶಿಲ್ಪಕಲೆಯ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿರುವ ಅರುಣ್ ಯೋಗಿರಾಜ್ ಅವರು ಕನ್ನಡ ನಾಡಿನ ಅಭಿಮಾನ ಹಾಗೂ ಮೈಸೂರಿನ ಗೌರವದ ಪ್ರತೀಕವಾಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ, ನಾಡಹಬ್ಬ ದಸರಾ ಉದ್ಘಾಟನೆಯ ಗೌರವವನ್ನು ನೀಡುವುದು ಮೈಸೂರು ಹಾಗೂ ಕರ್ನಾಟಕದ ಕಲಾ ಪರಂಪರೆಗೆ ಸಲ್ಲುವ ವಿಶೇಷ ಸನ್ಮಾನವಾಗಲಿದೆ ಎಂದು ರಿಷಿ ವಿಶ್ವಕರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2026ರ ದಸರಾ ಮಹೋತ್ಸವವನ್ನು ಅರುಣ್ ಯೋಗಿರಾಜ್ ಅವರಿಂದ ಉದ್ಘಾಟಿಸುವ ಮೂಲಕ ರಾಜ್ಯ ಸರ್ಕಾರ ಅವರ ಸಾಧನೆಗೆ ಗೌರವ ಸಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
