ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದ ದೊಡ್ಡಕೆರೆ ಪಾರ್ಕ್ ಐಲ್ಯಾಂಡ್ ಪ್ರದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವತಿ ಮತ್ತು ಯುವಕನಿಗೆ ಇಬ್ಬರು ವ್ಯಕ್ತಿಗಳು ಬೆದರಿಕೆ ಹಾಕಿ ಹಣ ಪಡೆದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.
ಸಂತ್ರಸ್ತೆಯ ಆರೋಪದ ಮೇಲೆ ಭಾನುವಾರ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಗ್ರಾಮವೊಂದರಿಂದ ವಿದ್ಯಾಭ್ಯಾಸಕ್ಕೆಂದು ಬಂದಿದ್ದ ದಲಿತ ಸಮುದಾಯಕ್ಕೆ ಸೇರಿದ ಯುವತಿ ಶುಕ್ರವಾರ ಸಂಜೆ ತನ್ನ ಸ್ನೇಹಿತನೊಂದಿಗೆ ಪಾರ್ಕ್ನಲ್ಲಿ ಕುಳಿತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಇಬ್ಬರು ಯುವಕರು ಇಲ್ಲಿ ಏನು ಮಾಡುತ್ತಿದ್ದೀರಾ ನಿಮ್ಮ ಮನೆಗೆ ಹಾಗೂ ಪೊಲೀಸರಿಗೆ ಹೇಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬೆದರಿಕೆಗೆ ಬೆದರಿದ ಯುವತಿ ಮತ್ತು ಸ್ನೇಹಿತ ಆರೋಪಿಗಳಿಗೆ ಹಣ ನೀಡಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ಮತ್ತೆ ಬಂದ ಆರೋಪಿಗಳಲ್ಲಿ ಒಬ್ಬಾತ, ಪಾರ್ಕ್ನಿಂದ ನಡೆದು ಬರುತ್ತಿದ್ದವರನ್ನು ಅಡ್ಡ ಹಾಕಿ ನಾನು ನಿಮ್ಮ ಅಣ್ಣನ ರೀತಿ, ಬಸ್ ಸ್ಟ್ಯಾಂಡ್ಗೆ ಬಿಡುತ್ತೇನೆ ಎಂದು ನಂಬಿಸಿ ಯುವತಿಯನ್ನು ಬೈಕ್ನಲ್ಲಿ ಕರೆದೊಯ್ದಿದ್ದಾನೆ. ಪಟ್ಟಣದ ಹೊರಭಾಗಕ್ಕೆ ಕರೆದೊಯ್ದು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಸಂತ್ರಸ್ತೆಯ ಸ್ನೇಹಿತನನ್ನು ಆದರ್ಶ ಶಾಲೆ ಬಳಿ ಇಳಿಸಲಾಗಿತ್ತು ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಭಾನುವಾರ ಮಳವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಂತ್ರಸ್ತ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದ್ದು,
ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.
ಘಟನೆ ಕುರಿತು ದಲಿತ ಸಂಘರ್ಷ ಸಮಿತಿ ಮುಖಂಡ ದ್ಯಾವಪಟ್ಟಣ ಯತೀಶ್ ಅವರು ಮಾತನಾಡಿ, ತಾಲೂಕಿನಲ್ಲಿ ಇಂತಹ ಪ್ರಕರಣ ನಡೆದಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.
ಆರೋಪಿಯನ್ನು ಶೀಘ್ರ ಬಂಧಿಸಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇವೆ. ಇಂದಿಗೂ ಕಾನೂನಿನ ಭಯವಿಲ್ಲದೆ ಅಪರಾಧ ಕೃತ್ಯ, ದಬ್ಬಾಳಿಕೆ ಮನೋಭಾವ ಉಳ್ಳವರು ಇರುವುದಕ್ಕೆ ಇದು ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದರು.
ಗ್ರಾಮಾಂತರ ಪ್ರದೇಶದ ಹಳ್ಳಿಗಳಿಂದ ಬರುವ ಮಕ್ಕಳಿಗೆ ಭದ್ರತೆಯ ಪ್ರಶ್ನೆ ಎದುರಾಗಿದೆ. ಈ ಪ್ರಕರಣವನ್ನು ಅಟ್ರಾಸಿಟಿ ಕಾಯ್ದೆಯಲ್ಲಿ ದಾಖಲಿಸಿಕೊಂಡು ಆರೋಪಿಗೆ ಸೂಕ್ತ ಕಠಿಣ ಶಿಕ್ಷೆ ನೀಡುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ದ್ಯಾವಪಟ್ಟಣ ಯತೀಶ್ ಒತ್ತಾಯಿಸಿದರು.
