ಮೈಸೂರು: ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಮುಖ್ಯ ಕಚೇರಿಯನ್ನು ರಮ್ಮನಹಳ್ಳಿ ಗ್ರಾಮದಲ್ಲೇ ಮುಂದುವರಿಸದಿದ್ದರೆ ಸಾವಿರಾರು ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಶಾಸಕ ಜಿ.ಟಿ.ದೇವೇಗೌಡ ಎಚ್ಚರಿಸಿದರು.
ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ ಸ್ಥಳಾಂತರದ ಗೊಂದಲದ ಕುರಿತು ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಶಾಸಕ ಜಿ.ಟಿ.ದೇವೇಗೌಡರನ್ನು ಭೇಟಿಯಾದ ರಮ್ಮನಹಳ್ಳಿ ಗ್ರಾಮದ ನೂರಾರು ಮುಖಂಡರು, ಜಿಲ್ಲಾಧಿಕಾರಿಗಳ ಆದೇಶವನ್ನೂ ಲೆಕ್ಕಿಸದೆ ಪಂಚಾಯಿತಿ ಕಚೇರಿಯನ್ನು ಬೇರೆಡೆಗೆ ವರ್ಗಾಯಿಸಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾರ್ಥಕ್ಕಾಗಿ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಕೆಲಸ ಮಾಡುತ್ತಿರುವ ಮುಖ್ಯಾಧಿಕಾರಿ ಮಹೇಶ್ ಮತ್ತು ಕಂದಾಯ ನಿರೀಕ್ಷಕ ಮಂಜುನಾಥ್ ಅವರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಎಂದು ಮುಖಂಡರು ಮನವಿ ಮಾಡಿದರು.
ಕೂಡಲೇ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಶಾಸಕ ಜಿ.ಟಿ.ದೇವೇಗೌಡರು, ಈಗಾಗಲೇ ನಿಮಗೆ ಸೂಚನೆ ನೀಡಿದ್ದರೂ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ ಸ್ಥಳಾಂತರದ ಸಮಸ್ಯೆಯನ್ನು ಏಕೆ ಇತ್ಯರ್ಥಪಡಿಸಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ರಮ್ಮನಹಳ್ಳಿಯಲ್ಲಿಯೇ ಪಂಚಾಯಿತಿ ಮುಖ್ಯ ಕಚೇರಿಯನ್ನು ಮುಂದುವರಿಸಲು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಾಳೆಯಿಂದಲೇ ರಮ್ಮನಹಳ್ಳಿ ಗ್ರಾಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಕಚೇರಿ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳದಿದ್ದರೆ, ಸಾವಿರಾರು ಗ್ರಾಮಸ್ಥರೊಂದಿಗೆ ನಿಮ್ಮ ಕಚೇರಿ ಮುಂದೆ ಧರಣಿ ನಡೆಸುತ್ತೇನೆ ಹಾಗೂ ಮುತ್ತಿಗೆ ಹಾಕುತ್ತೇನೆ ಎಂದು ಕಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಮ್ಮನಹಳ್ಳಿ ಮುಖಂಡರಾದ ವೆಂಕಟಯ್ಯ, ಎಂ.ಮಹದೇವು, ನಾಗರಾಜು, ಗೋಪಾಲ್, ಮಹದೇವ, ಜೆ.ಗೋವಿಂದ, ರಾಜಶೇಖರ, ರಮೇಶ ಮತ್ತಿತರರು ಉಪಸ್ಥಿತರಿದ್ದರು.
