ಮೈಸೂರು: ರಕ್ಷಾ ಬಂಧನವು ಕೇವಲ ಸಹೋದರ–ಸಹೋದರಿಯರ ನಡುವಿನ ಬಾಂಧವ್ಯದ ಹಬ್ಬವಲ್ಲ. ಸಮಾಜದಲ್ಲಿ ಪರಸ್ಪರ ರಕ್ಷಣೆ, ಸಹೋದರತ್ವ, ಸೌಹಾರ್ದತೆ ಹಾಗೂ ಸಾಮರಸ್ಯದ ಭಾವನೆ ಬೆಳೆಸುವ ಮಹತ್ವದ ಆಚರಣೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಅಧ್ಯಕ್ಷ ಪುನೀತ್ ಜಿ. ಕೂಡ್ಲೂರು ಹೇಳಿದರು.
ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿರುವ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಪ್ರತಿಯೊಂದು ಆಚರಣೆಗೂ ತನ್ನದೇ ಆದ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ ಎಂದು ಹೇಳಿದರು.
ರಕ್ಷಾ ಬಂಧನದ ಬಗ್ಗೆ ವಿವಿಧ ಪೌರಾಣಿಕ ಪರಂಪರೆಗಳಲ್ಲಿ ಉಲ್ಲೇಖಗಳಿದ್ದು, ಕಾಲಕ್ರಮೇಣ ಇದು ಸಹೋದರ-ಸಹೋದರಿಯರ ಪವಿತ್ರ ಬಾಂಧವ್ಯದ ಸಂಕೇತವಾಗಿ ಬೆಳೆದಿದೆ ಎಂದು ತಿಳಿಸಿದರು.
ಲಕ್ಷ್ಮೀದೇವಿಯು ಬಲಿ ಚಕ್ರವರ್ತಿಗೆ ರಕ್ಷೆ ಕಟ್ಟಿದ ಕಥೆ, ದ್ರೌಪದಿಯು ಶ್ರೀಕೃಷ್ಣನ ಕೈಗೆ ತನ್ನ ಸೀರೆಯ ಅಂಚನ್ನು ಕಟ್ಟಿದ ಪ್ರಸಂಗ ಹಾಗೂ ಇಂದ್ರನಿಗೆ ಆತನ ಪತ್ನಿ ರಕ್ಷಾ ಸೂತ್ರ ಕಟ್ಟಿದ ಪೌರಾಣಿಕ ಉಲ್ಲೇಖಗಳು ರಕ್ಷಾ ಬಂಧನದ ಮಹತ್ವವನ್ನು ಸಾರುತ್ತವೆ ಎಂದು ಅವರು ತಿಳಿಸಿದರು.
ಶಾಲಾ–ಕಾಲೇಜುಗಳು, ಕಚೇರಿಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸಾಮೂಹಿಕವಾಗಿ ರಕ್ಷಾ ಬಂಧನ ಆಚರಿಸುವ ಮೂಲಕ ಸಮಾಜದ ವಿವಿಧ ವರ್ಗಗಳ ನಡುವೆ ಆತ್ಮೀಯತೆ ಮತ್ತು ಭ್ರಾತೃತ್ವದ ಭಾವನೆ ಬೆಳೆಸಬಹುದು. ನಾವೆಲ್ಲರೂ ಪರಸ್ಪರ ಸಹೋದರ–ಸಹೋದರಿಯರಂತೆ ಬದುಕುವ ಮನೋಭಾವ ಬೆಳೆಸಿಕೊಂಡರೆ ದೇಶದಲ್ಲಿ ಸಾಮರಸ್ಯ ಹೆಚ್ಚಲು ಸಾಧ್ಯ ಎಂದು ಪುನೀತ್ ಜಿ. ಕೂಡ್ಲೂರು ಹೇಳಿದರು.
ವಿದ್ಯಾರ್ಥಿನಿ ಕುಮಾರಿ ವೈಷ್ಣವಿ ಕೆ.ಆರ್. ಮಂಜು ಮಾತನಾಡಿ, ಸಮಾಜದಲ್ಲಿ ಪೋಷಕರು,ಸಹೋದರ–ಸಹೋದರಿಯರು, ಶಿಕ್ಷಕರು, ಪೊಲೀಸರು, ಸೈನಿಕರು, ವೈದ್ಯರು ಸೇರಿದಂತೆ ಅನೇಕರು ವಿವಿಧ ರೀತಿಯಲ್ಲಿ ನಮ್ಮ ರಕ್ಷಣೆಗೆ ನಿಲ್ಲುತ್ತಾರೆ. ಆದ್ದರಿಂದ ರಕ್ಷಾ ಬಂಧನವನ್ನು ಕೇವಲ ಕುಟುಂಬದ ಸಂಬಂಧಗಳಿಗೆ ಸೀಮಿತಗೊಳಿಸದೆ, ನಮ್ಮನ್ನು ರಕ್ಷಿಸುವ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವ ಪ್ರತಿಯೊಬ್ಬರಿಗೂ ರಾಖಿ ಕಟ್ಟಿ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.
ಶ್ರೀಮತಿ ಸ್ವಾತಿ ನಿರಂಜನ್ ಮಾತನಾಡಿ, ಸಾಮೂಹಿಕ ಹಾಗೂ ಸಾಮಾಜಿಕವಾಗಿ ರಕ್ಷಾ ಬಂಧನ ಆಚರಿಸುವುದು ವಿಶೇಷ ಅನುಭವವಾಗಿದೆ. ವಿವಿಧ ಕ್ಷೇತ್ರಗಳ ವ್ಯಕ್ತಿಗಳ ಪರಿಚಯವಾಗಿ ಅವರೊಂದಿಗೆ ಭ್ರಾತೃತ್ವದ ಭಾವನೆ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ನಿರ್ದೇಶಕಿ ಪೂಜಾ ಎನ್. ಮಾತನಾಡಿ, ಸಮಾಜದಲ್ಲಿ ಸಹೋದರತ್ವ, ಸೌಹಾರ್ದತೆ ಹಾಗೂ ಸಾಮರಸ್ಯ ಬೆಳೆಸಲು ರಕ್ಷಾ ಬಂಧನ ಸಹಕಾರಿ. ಪ್ರತಿಯೊಬ್ಬ ಹೆಣ್ಣಿನಲ್ಲೂ ‘ಸಹೋದರಿ’ ಎಂಬ ಗೌರವದ ಭಾವನೆ ಮೂಡಿಸುವ ಮೂಲಕ ಮಹಿಳೆಯರಲ್ಲಿ ಸುರಕ್ಷತೆ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಉದ್ದೇಶವೂ ಈ ಆಚರಣೆಯಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರಸ್ವತಿ ಗಣೇಶ್, ಪೂಜಾ ಪುನೀತ್, ಕುಮಾರಿ ವೈಷ್ಣವಿ, ಸ್ವಾತಿ ನಿರಂಜನ್, ಅರ್ಚನಾ ಮಂಜು, ಸ್ವರಾಲಿ ರಾಜೇಂದ್ರ, ಅಕ್ಷತಾ ಪರಶುರಾಮ, ಸುಧಾ ಪ್ರಕಾಶ್, ಪುನೀತ್, ನಿರಂಜನ್, ರಾಜೇಂದ್ರ ಕುಲಕರ್ಣಿ, ಕೆ.ಆರ್. ಗಣೇಶ್, ಕೆ.ಆರ್. ಮಂಜು, ದತ್ತಾತ್ರೇಯ, ಶೈಲಾ ಹುಲುಗಾದ್ರಿ, ಶಾರದಮ್ಮ, ಪರಶುರಾಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಾಲಕರಾದ ಪೃಥು ಪಿ. ಅದ್ವೈತ್, ಸ್ವರಾಜ್ ಹಾಗೂ ವಾಗ್ಮಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
