ಮೈಸೂರು: ಸಾರ್ವಜನಿಕರು ತಮ್ಮ ಆಸ್ತಿಗೆ ಇ ಖಾತಾ ಮಾಡಿಸಿಕೊಳ್ಳಲು ನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.
ಮೈಸೂರು ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಈ ಖಾತಾ ಅಭಿಯಾನ ಚುರುಕುಗೊಳಿಸುವಂತೆ ಎಂದು ಸಲಹೆ ನೀಡಿದರು.
ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಮ್ಯಾಪಿಂಗ್ ಆಗಬೇಕು. ಆಗ ಆಸ್ತಿ ತೆರಿಗೆಯನ್ನು ನಿಖರವಾಗಿ ಸಂಗ್ರಹಿಸಬಹುದು ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆ ಮತ್ತು ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ನಿಗದಿತವಾಗಿ ಪರಿಷ್ಕರಣೆ ಮಾಡಬೇಕು. ಇದರಿಂದ ಪಾಲಿಕೆಯ ಆದಾಯ ಹೆಚ್ಚಾಗುತ್ತದೆ. 2011 ರಿಂದ ತೆರಿಗೆ ಪಾವತಿಸದೇ ಇರುವ ವಾಣಿಜ್ಯ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು.
ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದ್ದು, ತರಕಾರಿ, ಹಣ್ಣು ಮತ್ತು ಸಣ್ಣ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಶಾಸಕರೊಂದಿಗೆ ಚರ್ಚಿಸಿ ವಲಯವಾರು ಸ್ಥಳ ಗುರುತಿಸಿ ವಾಣಿಜ್ಯ ಮಳಿಗೆ, ಫುಡ್ ಸ್ಟ್ರೀಟ್ ಮತ್ತು ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು ಎಂದು ಡಾ.ಯತೀಂದ್ರ ತಿಳಿಸಿದರು.
ಸಭೆಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ, ಅಮೃತ್-2 ಯೋಜನೆ, ಎನ್.ಜಿ.ಟಿ ಕಾಮಗಾರಿಗಳ ಪ್ರಗತಿ ಬಗ್ಗೆ ಸಚಿವರು ಪರಿಶೀಲನೆ ನಡೆಸಿದರು.
ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣಗಳ ಬಾಡಿಗೆ ಮತ್ತು ಮೂಲಸೌಕರ್ಯಗಳ ಬಗ್ಗೆ ಪ್ರಸ್ತಾಪಿಸಿದರು. ಹಿಂದೆ ಒಪ್ಪಂದ ಮಾಡಿಕೊಂಡವರು ಬೇರೆ, ಈಗ ವ್ಯಾಪಾರ ಮಾಡುತ್ತಿರುವವರು ಬೇರೆ ಇದ್ದಾರೆ. ಇದನ್ನು ಸರಿಪಡಿಸಬೇಕು ಎಂದು ತಿಳಿಸಿದರು.
ದಾನದ ಮೇಲೆ ಪಡೆದು ಶಾಲಾ ಕಾಲೇಜು ನಡೆಯುತ್ತಿರುವ ಆಸ್ತಿಗಳ ಖಾತೆ ಸಮಸ್ಯೆ ಬಗ್ಗೆಯೂ ಚರ್ಚೆ ನಡೆಯಿತು. ಈ ವೇಳೆ ಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ದಾನ ಪಡೆದ ಭೂಮಿಯಲ್ಲಿ 12 ವರ್ಷ ನಿರಂತರವಾಗಿ ಸರ್ಕಾರಿ ಶಾಲೆ ನಡೆದಿದ್ದರೆ ಅದನ್ನು ಸರ್ಕಾರಿ ಆಸ್ತಿ ಎಂದು ಪರಿಗಣಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ನಗರದಲ್ಲಿ ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿ ಲೇಔಟ್ ನಲ್ಲೂ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಆಗಬೇಕು ಎಂದು ಸಲಹೆ ನೀಡಿದರು.
ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಸಣ್ಣ ಮನೆಗಳಲ್ಲಿ ವಾಸಿಸುವವರಿಗೆ ಲಕ್ಷಾಂತರ ರೂಪಾಯಿ ನೀರಿನ ಬಿಲ್ ಬಾಕಿ ಇದೆ, ಅವರು ಪಾವತಿಸಲು ಸಾಧ್ಯವಿಲ್ಲ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ವಿವೇಕಾನಂದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಪುಷ್ಪವಲ್ಲಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
