ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶವನ್ನು ವಿರೋಧಿಸಿ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನಲೆ ಮೈಸೂರಿನಲ್ಲಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಬಂದ್ ಅಂಗವಾಗಿ ಕರ್ನಾಟಕ ಸೇನಾ ಪಡೆ ವತಿಯಿಂದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ, ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆ ಚಳವಳಿ ನಡೆಸಿದರು.ಆದರೆ ಹೋರಾಟಗಾರರು ರಸ್ತೆಯಲ್ಲಿ ಕೂರುತ್ತಿದ್ದಂತೆ ಪೋಲೀಸರು ಬಂಧಿಸಿದರು.
ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನಮ್ಮದು,ನೀರು ಕೊಡೆವು,ಕಾವೇರಿ ನ್ಯಾಯ ಮಂಡಳಿಗೆ ದಿಕ್ಕಾರ ಮುಂತಾದ ಘೋಷಣೆಗಳನ್ನು ಕೂಗಿ ಬಸ್ ನಿಲ್ದಾಣದ ಆವರಣದಲ್ಲಿ ಕುಳಿತು ಬಸ್ ತಡೆಯಲು ಮುಂದಾದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
20 ಕ್ಕೂ ಹೆಚ್ಚು ಮಂದಿಯನ್ನ ಪೊಲೀಸರು ಬಂಧಿಸಿ,ವ್ಯಾನ್ ನಲ್ಲಿ ಕರೆದೊಯ್ದರು.
