ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿರುವುದನ್ನು ನಮ್ಮ ಸರ್ಕಾರ ಖಂಡಿಸುತ್ತದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,ಬೆಲೆ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸುತ್ತದೆ ಎಂದು ತಿಳಿಸಿದರು.
ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ನಂತರ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸುವ ನಿರೀಕ್ಷೆ ಇತ್ತು,ಹಾಗೇನೆ ಮಾಡಿದ್ದಾರೆ,ಆದರೆ ಕರ್ನಾಟಕದಲ್ಲಿ ಇತರೆ ರಾಜ್ಯಗಳಿಗಿಂತ ಗಣನೀಯವಾಗಿ ಕಡಿಮೆಯಿರುವ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿದ್ದರ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದ್ದರು. ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ನಂತರ ಹಲವು ಬಾರಿ ಪೆಟ್ರೋಲ್ ಡೀಸೆಲ್ ದರಗಳನ್ನು ಹೆಚ್ಚಿಸಿದ್ದಾರೆ. ಈ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ, ವಿಶೇಷವಾಗಿ ಕಾರ್ಮಿಕರು, ರೈತರು, ಬಡವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಕೇಂದ್ರ ಸರ್ಕಾರದ ಈ ಬೆಲೆ ಏರಿಕೆಯ ಕ್ರಮವನ್ನು ರಾಜ್ಯ ಸರ್ಕಾರ ಖಂಡಿಸುವುದಲ್ಲದೇ, ಈ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿಯವರ ಆಡಳಿತ ಪ್ರಾರಂಭವಾಗುವ ಮುಂಚೆ 413 ರೂ.ಗಳಿಂದ ಗೃಹಬಳಕೆಯ ಎಲ್ ಪಿ ಜಿ ದರ ಈಗ 1000 ರೂಗಳನ್ನು ದಾಟಿದೆ. ಈ ಬೆಲೆ ಏರಿಕೆ ದಿನನಿತ್ಯದ ಬೆಲೆ ಹೆಚ್ಚಳಕ್ಕೂ ಕಾರಣವಾಗಲಿದೆ. ಎಲ್ ಪಿ ಜಿ ಪೂರೈಕೆ ವ್ಯತ್ಯಯವಾಗಿರುವ ನಡುವೆಯೇ ಬೆಲೆ ಏರಿಕೆಯು ಜನಜೀವನವನ್ನು ಅಸ್ತವ್ಯಸ್ತ ಗೊಳಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನೀಟ್ ಯುಜಿ ಮರು ಪರೀಕ್ಷೆಗೆ ದಿನಾಂಕ ನಿಗದಿಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ನೀಟ್ ಯುಜಿ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ವಿಫಲರಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಎಸ್ ಐ ಆರ್ ಪ್ರಕ್ರಿಯೆ ಪ್ರಾರಂಭವಾಗಲಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ, ರಾಜ್ಯದಲ್ಲಿ ಚುನಾವಣಾ ಆಯೋಗದಿಂದ ಎಸ್ ಐ ಆರ್ ಪ್ರಕ್ರಿಯೆ ಪ್ರಾರಂಭವಾಗಿದೆ ಇದಕ್ಕೆ ಬೇಕಾದ ಸಿದ್ದತೆಯನ್ನು ಸರ್ಕಾರ ಮಾಡಿಕೊಳ್ಳುತ್ತಿದೆ ಎಂದು ಸಿಎಂ ಉತ್ತರಿಸಿದರು.
