ಮೈಸೂರು: ನಗರದ ಹೊರವಲಯದ ಬಂಡಿಪಾಳ್ಯದಲ್ಲಿರುವ ರಸಗೊಬ್ಬರ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ 4.26 ಲಕ್ಷ ರೂ. ಮೌಲ್ಯದ ಅನಧಿಕೃತ ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ತಾಲ್ಲೂಕು ಕಸಬಾ ಹೋಬಳಿಯ ಬಂಡಿಪಾಳ್ಯದಲ್ಲಿರುವ ಶ್ರೀ ವೈಷ್ಣವಿ ಎಂಟರ್ಪ್ರೈಸಸ್ ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಈ ದಾಳಿ ನಡೆದಿದೆ.
ಅಂಗಡಿಯಲ್ಲಿ ಅಧಿಸೂಚಿತವಲ್ಲದ ಶೇ.100 ನೀರಿನಲ್ಲಿ ಕರಗುವ ರಸಗೊಬ್ಬರವನ್ನು (100% water soluble fertilizer) ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದು ರಸಗೊಬ್ಬರ ನಿಯಂತ್ರಣ ಆದೇಶ 1985 ರ ಕಲಂ 7 ಮತ್ತು ಕಲಂ 19(1)ಎ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ವೇಳೆ ಒಟ್ಟು 340 ಲೀಟರ್ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಒಟ್ಟು ಮೌಲ್ಯ 4,26,883 ರೂ. ಎಂದು ಅಂದಾಜಿಸಲಾಗಿದೆ.
ಮೈಸೂರು ಜಿಲ್ಲಾ ಜಾರಿ ವಿಭಾಗದ ಸಹಾಯಕ ಕೃಷಿ ನಿರ್ದೇಶಕಿ ತೇಜಸ್ವಿ ಎಲ್. ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.
