(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ವೈದ್ಯರ ಕಾರ್ ಪಾರ್ಕಿಂಗ್ ನಲ್ಲಿ ಸಿಬ್ಬಂದಿಗಳ ವಾಹನ ನಿಲುಗಡೆ ಯಾಗುವುದರಿಂದ ಕರ್ತವ್ಯ ನಿರತ ವೈದ್ಯರು ವಾಹನ ಪಾರ್ಕಿಂಗ್ ಮಾಡಲು ತೀವ್ರ ತೊಂದರೆಯಾಗಿದೆ.
ಆಸ್ಪತ್ರೆಯ ಹಿಂಭಾಗದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ನೂತನ ವಸತಿ ಗೃಹಗಳ ಕಟ್ಟಡಕ್ಕೆ ಹೊಂದಿಕೊಂಡಂತೆ ಕರ್ತವ್ಯ ನಿರತ ವೈದ್ಯರ ಕಾರುಗಳ ನಿಲುಗಡೆಗೆ ಪಾರ್ಕಿಂಗ್ ನಿರ್ಮಿಸಲಾಗಿದೆ, ಆದರೆ ಇಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ವಾಹನಗಳು ನಿಂತಲ್ಲಿಯೇ ನಿಂತಿರುತ್ತವೆ.
ಒಮ್ಮೆ ನಿಲ್ಲಿಸಿದ ವಾಹನಗಳನ್ನು ಒಂದು ವಾರ ಅಥವಾ ಮೂರು ನಾಲ್ಕು ದಿನಗಳವರೆಗೂ ತೆಗೆಯುವುದಿಲ್ಲ ಇದರಿಂದಾಗಿ ಕರ್ತವ್ಯಕ್ಕೆ ಬರುವ ವೈದ್ಯರುಗಳು ತಮ್ಮ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಹೊರಗಡೆ ಬಿಸಿಲಿನಲ್ಲಿ ಪಾರ್ಕಿಂಗ್ ಮಾಡಬೇಕಾಗಿದೆ ಎಂದು ಹಿರಿಯ ವೈದ್ಯರಾದ ಡಾಕ್ಟರ್ ಬಸವರಾಜ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರ ಮಧ್ಯಾಹ್ನ ಡಾ.ಬಸವರಾಜು ಅವರು ಕರ್ತವ್ಯಕ್ಕೆ ತೆರಳಲು ತಮ್ಮ ಕಾರನ್ನು ಪಾರ್ಕಿಂಗ್ ಮಾಡಲು ಕಾರ್ ಪಾರ್ಕಿಂಗ್ ಶೆಡ್ ಗೆ ಬಂದಾಗ ಅಲ್ಲಿ ಸಿಬ್ಬಂದಿಗಳ ಕಾರು ನಿಂತಲ್ಲಿಯೇ ನಿಂತಿದ್ದವು. ಇದರಿಂದ ಅಸಮಾಧಾನ ಗೊಂಡ ಅವರು ಆಸ್ಪತ್ರೆಯ ಆಡಳಿತಾಧಿಕಾರಿ,ವೈದ್ಯಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವೈದ್ಯರ ಕಾರ್ ಪಾರ್ಕಿಂಗ್ ತುಂಬಾ ಚಿಕ್ಕದಾಗಿದ್ದು ನಾಲ್ಕರಿಂದ ಐದು ಕಾರುಗಳನ್ನು ನಿಲ್ಲಿಸಲು ಮಾತ್ರ ಅವಕಾಶವಿದೆ. ಆದರೆ ಇದು ಉಪವಿಭಾಗ ಆಸ್ಪತ್ರೆ ಆಗಿರುವುದರಿಂದ ಇಲ್ಲಿ 15 ಕ್ಕೂ ಹೆಚ್ಚು ವೈದ್ಯರು ಕರ್ತವ್ಯ ನಿರ್ವಹಿಸು ತ್ತಿದ್ದಾರೆ. ಹಾಗಾಗಿ ಈ ಕಾರ್ ಪಾರ್ಕಿಂಗ್ ಇಂತಹ ದೊಡ್ಡ ಆಸ್ಪತ್ರೆಗೆ ಸಾಕಾಗುವುದಿಲ್ಲ.
ಇಲ್ಲಿ ಕಾರ್ ಪಾರ್ಕಿಂಗ್ ನಿರ್ಮಿಸಿರುವುದು ಆಸ್ಪತ್ರೆಯ ಸಿಬ್ಬಂದಿಗಳ ವಸತಿಗೃಹದ ಕಟ್ಟಡಕ್ಕೆ ಹೊಂದಿಕೊಂಡಂತೆ. ಈ ಸಿಬ್ಬಂದಿಗಳ ಕುಟುಂಬ ಇಲ್ಲಿ ವಾಸಿಸುವುದರಿಂದ ಅವರಿಗೂ ಸಹ ಮುಕ್ತವಾಗಿ ತಿರುಗಾಡಲು ಸಾಧ್ಯವಾಗುವುದಿಲ್ಲ.
ಹಾಲಿ ಈ ಕಟ್ಟಡದ ಮೇಲ್ಭಾಗದಲ್ಲಿ ಇಬ್ಬರು ಸಿಬ್ಬಂದಿಗಳ ಕುಟುಂಬಗಳು ವಾಸವಾಗಿವೆ ಕೆಳಗಿನ ಎರಡು ನಿವಾಸಗಳು ಖಾಲಿಯಿದ್ದು ಆ ಎರಡು ನಿವಾಸಗಳನ್ನೂ ಸಿಬ್ಬಂದಿಗಳಿಗೆ ನಿಯೋಜನೆ ಮಾಡಿದರೆ ಇಲ್ಲಿ ವಾಸ ಮಾಡುವ ಕುಟುಂಬಗಳು ತಿರುಗಾಡಲು ಸಹ ಬಹಳ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಪಾರ್ಕಿಂಗ್ ಅನ್ನು ಬೇರೆ ಕಡೆ ಸ್ಥಳಾಂತರಿಸಿ ವಿಶಾಲವಾಗಿ ನಿರ್ಮಿಸಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಇಲ್ಲಾ ಇನ್ನಷ್ಟು ವಿಸ್ತರಣೆ ಮಾಡುವ ಅಗತ್ಯವಿದೆ.
