(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ಜಿಲ್ಲೆಯ ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಸಣಾಪುರ ಗ್ರಾಮದಲ್ಲಿನ ಘಟನೆಗೆ ಸಂಬಂಧಪಟ್ಟಂತೆ,ಎರಡು ಪ್ರಭಲ ಸಂಘಟನೆಗಳು ಹಮ್ಮಿಕೊಂಡಿದ್ದ ಮೆರವಣಿಗೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಯಜಮಾನರು ಮತ್ತು ಜಿಲ್ಲಾ ಅಂಬೇಡ್ಕರ್ ಸಂಘಗಳ ಒಕ್ಕೂಟ, ಚಾಮರಾಜನಗರ ಜಿಲ್ಲೆ ಮತ್ತು ಉಪ್ಪಾರ ಸಮುದಾಯದ ಗಡಿಕಟ್ಟೆ ಯಜಮಾನರುಗಳು ಮತ್ತು ಜಿಲ್ಲಾ ಭಗೀರಥ ಸಂಘಗಳ ಒಕ್ಕೂಟದವರು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆಗೆ ಸೂಕ್ತ ರಕ್ಷಣೆ ಮತ್ತು ಅನುಮತಿ ನೀಡಲು ಮನವಿ ಪತ್ರ ಸಲ್ಲಿಸಿದ್ದರು.
ಆದರೆ ಸಂಘಟನೆಗಳವರಿಗೆ ಪ್ರತಿಭಟಬಾ ಮೆರವಣಿಗೆಗೆ ಅನುಮತಿ ನೀಡಲು ಪೊಲೀಸ್ ಇಲಾಖೆ ನಿರಾಕರಿಸಿದೆ.
ಜೂನ್ 14 ರಂದು ಚಾಮರಾಜನಗರ ತಾಲ್ಲೂಕಿನ ಮಸಣಾಪುರ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಸಗಣಿ ಬಳಿದಿದ್ದಾರೆ ಎಂಬ ವಿಚಾರವಾಗಿ ಹಾಗೂ ಆರೋಪಿತನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಯಳಂದೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಎರಡೂ ಪ್ರಕರಣಗಳು ಸಹ ತನಿಖೆಯಲ್ಲಿರುವಾಗಲೇ ಎರಡೂ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿದ್ದವು.
ಉಪ್ಪಾರ ಸಮುದಾಯ ಹಾಗೂ ಪರಿಶಿಷ್ಟ ಜನಾಂಗದ ಬಲಗೈ ಸಮುದಾಯಗಳು ಜಿಲ್ಲೆಯಲ್ಲಿ ಎರಡು ಪ್ರಬಲ ಕೋಮುಗಳಾಗಿದ್ದು, ಪ್ರತಿಭಟನೆಯನ್ನು ಕೈಗೊಂಡಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಮತ್ತೊಂದು ಕೋಮಿನ ಬಗ್ಗೆ ಅವಹೇಳನಕಾರಿ ಘೋಷಣೆಗಳನ್ನು ಕೂಗುವುದು ಹಾಗೂ ನಾಯಕರು ಪ್ರಚೋದನಕಾರಿಯಾಗಿ ಭಾಷಣ ಮಾಡುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಘ್ನ ಗೊಳಿಸುವ ಸಾಧ್ಯತೆ ಇರುತ್ತದೆ. ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟಾಗುವ ಸಾಧ್ಯತೆಗಳಿದೆ, ಮುಂಬರುವ ದಿನಗಳಲ್ಲಿ ಉಭಯ ಕೋಮುಗಳ ನಡುವೆ ಕೋಮು ಸಾಮರಸ್ಯ ಹಾಳಾಗುವ ಬಗ್ಗೆ ಗುಪ್ತ ಮಾಹಿತಿಯಿಂದ ತಿಳಿದುಬಂದಿರುವ ಹಿನ್ನಲೆಯಲ್ಲಿ ಎಸ್ಪಿ ಮುತ್ತುರಾಜ್ ಅವರು ಮೆರವಣಿಗೆಗೆ ಅನುಮತಿ ನಿರಾಕರಿಸಿ ಪ್ರಕಟಣೆ ಹೊರಡಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ್ತು ಎರಡೂ ಕೋಮುಗಳ ನಡುವಿನ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
