ಬೆಂಗಳೂರು: ಒಂದೆಡೆ ಗ್ಯಾರೆಂಟಿಗೆ ಕತ್ತರಿ ಹಾಕಿ, ಮತ್ತೊಂದೆಡೆ ಬಡ ವೃದ್ಧರ, ವಿಧವೆಯರ, ವಿಕಲಚೇತನರ ಹೊಟ್ಟೆಗೆ ಹೊಡೆಯುತ್ತಿದೆ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ತಾವೇ ತಂದ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 16 ಲಕ್ಷಕ್ಕೂ ಅಧಿಕ ಬಡ ಜನರ ಸಾಮಾಜಿಕ ಭದ್ರತಾ ಪಿಂಚಣಿಯನ್ನು ತೆಗೆದು ಹಾಕಿದೆ ಎಂದು ಅಶೋಕ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ,
ಗ್ಯಾರೆಂಟಿ ಕೊಡುವುದಾಗಿ ಡಂಗುರ ಸಾರಿದ ನೀವು, ಈಗ ಬಡವರ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು ವಿಕಲಚೇತನರ ಮಾಶಾಸನಕ್ಕೆ ಕತ್ತರಿ ಹಾಕುತ್ತಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕಳೆದ 3 ತಿಂಗಳಿಂದ ಲಕ್ಷಾಂತರ ಹಿರಿಯ ನಾಗರಿಕರು ಒಂದು ಕಾಸು ಹಣವಿಲ್ಲದೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ನೀವು ಮಾತ್ರ ರೆಸಾರ್ಟ್ ನಲ್ಲಿ ಮೋಜು ಮಸ್ತಿ ಮಾಡುತ್ತಾ,ಬಡವರ ಹೊಟ್ಟೆಗೆ ಹೊಡೆಯುತ್ತಿದ್ದೀರ, ಅವರ ಕಣ್ಣೀರಿನ ಶಾಪ ನಿಮಗೆ ತಟ್ಟದೇ ಇರುತ್ತದೆಯೇ ಎಂದು ಚಾಟಿ ಬೀಸಿದ್ದಾರೆ.
ಒಂದೆಡೆ ಸತ್ತವರ ಖಾತೆಗಳಿಗೂ ಗೃಹಲಕ್ಷ್ಮಿ ಹಣ ಹಾಕಿ ಸಾವಿರಾರು ಕೋಟಿ ಹಗರಣ ಮಾಡಿದ್ದೀರಿ. ಮತ್ತೊಂದೆಡೆ ಅರ್ಹ ಬಡವರನ್ನು ಸಂದೇಹಾಸ್ಪದ ಎಂದು ಹಣೆಪಟ್ಟಿ ಕಟ್ಟಿ, ಇದ್ದ ಪಿಂಚಣಿಯನ್ನೂ ಕಿತ್ತುಕೊಳ್ಳುತ್ತಿದ್ದೀರಿ,ನಿಮ್ಮ ಈ ‘ಕತ್ತರಿ’ ರಾಜಕೀಯಕ್ಕೆ ಬಡವರು ಬಲಿಯಾಗಬೇಕೇ?
ನಿಮ್ಮ “ಪಾರದರ್ಶಕ” ಆಡಳಿತದ ಅಸಲಿ ಮುಖವಾಡ ಈಗ ಬಯಲಾಗಿದೆ. ಬೊಕ್ಕಸ ಖಾಲಿ ಮಾಡಿ, ಅಭಿವೃದ್ಧಿಯನ್ನೂ ನಿಲ್ಲಿಸಿ, ಈಗ ಸದ್ದಿಲ್ಲದೆ ಅಸಹಾಯಕರ ಹೊಟ್ಟೆ ಮೇಲೆ ಹೊಡೆಯುತ್ತಿರುವ ನಿಮ್ಮ ಕತ್ತರಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಅಶೋಕ ಜರಿದಿದ್ದಾರೆ.
ಮುಖ್ಯಮಂತ್ರಿಗಳೇ, ತಕ್ಷಣವೇ ತಡೆಹಿಡಿಯಲಾದ ಎಲ್ಲಾ 16 ಲಕ್ಷ ಬಡವರ ಪಿಂಚಣಿಯನ್ನು ಬಿಡುಗಡೆ ಮಾಡಿ. ಇಲ್ಲದಿದ್ದರೆ ಕರ್ನಾಟಕದ ಪ್ರತಿಯೊಬ್ಬ ಹಿರಿಯ ನಾಗರಿಕರು ಮತ್ತು ತಾಯಂದಿರು ಬೀದಿಗಿಳಿದು ನಿಮ್ಮ ನಾಟಕಕ್ಕೆ ಮುಕ್ತಿ ಹಾಡುತ್ತಾರೆ ಎಂದು ಎಚ್ಚರಿಸಿದ್ದಾರೆ.
