ಮೈಸೂರು: ಮೈಸೂರು ಅರಮನೆ ಸುತ್ತಮುತ್ತ ಫೋಟೋಶೂಟ್ ಹಾಗೂ ಸೆಲ್ಫಿ ಹೆಸರಿನಲ್ಲಿ ರಸ್ತೆಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆಗೆ ತಕ್ಷಣ ಕಡಿವಾಣ ಹಾಕಬೇಕು
ಎಂದು ಸಾಮಾಜಿಕ ಕಾರ್ಯಕರ್ತ ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ.
ಫೋಟೋಶೂಟ್ ಹಾಗೂ ಸೆಲ್ಫಿ ಗೀಳಿನಿಂದಾಗಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕರ ಸಂಚಾರ ಸುರಕ್ಷತೆಗೂ ಧಕ್ಕೆಯಾಗುತ್ತಿದೆ ಎಂದು ಅಯ್ಯಂಗಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಅರಮನೆಯ ಸುತ್ತಮುತ್ತ ಸಾರ್ವಜನಿಕ ರಸ್ತೆಗಳು ಫೋಟೋಶೂಟ್ ತಾಣಗಳಾಗಿ ಮಾರ್ಪಡುತ್ತಿರುವುದರಿಂದ ವಾಹನ ಸವಾರರು ದಿನನಿತ್ಯ ಪರದಾಡುವಂತಾಗಿದೆ.
ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟುಮಾಡುವ ಇಂತಹ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಂದು ಫೋಟೊಶೂಟ್ ನಡೆಯುವಾಗ ಗೊಂದಲವಾಗಿ ಬಸ್- ದ್ವಿಚಕ್ರವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತರು ದುಃಖ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಜೀವಕ್ಕೆ ಯಾವುದೇ ಬೆಲೆ ಇಲ್ಲವೇ ಎಂದು ಪ್ರಶ್ನಿಸಿರುವ ವಿಕ್ರಮ್ ಅಯ್ಯಂಗಾರ್, ಅರಮನೆಯ ಸುತ್ತಮುತ್ತ ಅನಧಿಕೃತ,ಅಧಿಕೃತ ಫೋಟೋಶೂಟ್ಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಿ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಇಂತಹ ದುರಂತಗಳಿಗೆ ಯಾರು ಹೊಣೆಗಾರರು? ಸಾರ್ವಜನಿಕರ ಜೀವಕ್ಕೆ ಬೆಲೆ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಇಂದು ಅಪಘಾತದಲ್ಲಿ ಮೃತಪಟ್ಟ ಬಾಲಕಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
