ಮೈಸೂರು: ರಾಜರಾಜೇಶ್ವರಿ ನಗರದಲ್ಲಿರುವ ನಿರೀಕ್ಷೆ ವಿಶೇಷ ಶಾಲೆಯ 21ನೇ ವಾರ್ಷಿಕೋತ್ಸವದ ಅಂಗವಾಗಿ ನಿರೀಕ್ಷೆ ಉತ್ಸವದಲ್ಲಿ ವಿಶೇಷ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೊಲೀಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ದೀನಾ ತಿಮ್ಮಯ್ಯ ಅವರು, ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿದರು.
ನಮಗೆಲ್ಲರಿಗೂ ದೇವರು ಸರಿಯಾದ ಅಂಗಾಂಗಗಳನ್ನು ನೀಡಿದ್ದಾರೆ. ಆದರೆ ಕೆಲವು ಮಕ್ಕಳಿಗೆ ನೂನ್ಯತೆಯನ್ನು ನೀಡಿದ್ದಾರೆ. ನೂನ್ಯತೆಯನ್ನು ಹೊಂದಿರುವ ಮಕ್ಕಳು ಸಮಾಜಕ್ಕೆ ಬಂದಾಗ ಅದು ದೌರ್ಬಲ್ಯ ಆಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ವಿಶೇಷ ಮಕ್ಕಳಿಗೆ ಬೇಕಾಗಿರುವುದು ಕರುಣೆಯಲ್ಲ ಕಾಳಜಿ ಎಂದು ಹೇಳಿದರು.
ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳುವ ಹೆತ್ತವರು ಮತ್ತು ಶಿಕ್ಷಣ ನೀಡುವ ಶಿಕ್ಷಕರು ಹಾಗೂ ಚಿಕಿತ್ಸೆ ನೀಡುವ ವರ್ಗಕ್ಕೆ ಹೆಚ್ಚಿನ ತಾಳ್ಮೆ ಮತ್ತು ಸಹನೆ ಅಗತ್ಯವಿದ್ದು ಇದನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ವಿಕಲಚೇತನ ಮಕ್ಕಳಿಗೆ ಫಿಸಿಯೋಥೆರಫಿ ಚಿಕಿತ್ಸಾ ವಿಧಾನದಿಂದ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳಾಗುತ್ತಿವೆ ಎಂದು ದೀನಾ ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ವಲಯ ಆರ್ ಎಫ್ ಒ ಗುರುಮೂರ್ತಿ, ಶಾಲೆಯ ಅಧ್ಯಕ್ಷರಾದ ಸವೀನ ನಂಜಪ್ಪ, ಕಾರ್ಯದರ್ಶಿ ಆನಂದ್, ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರು ಹಾಜರಿದ್ದರು.
