ಮೈಸೂರು: ನೀಟ್ ಪರೀಕ್ಷೆ
ರದ್ದಾಗಿರುವುದು ಕೇಂದ್ರ ಸರ್ಕಾರದ ಬಹುದೊಡ್ಡ ಹಗರಣವಾಗಿದೆ ಎಂದು ಚಾಮರಾಜ ಕ್ಷೇತ್ರದ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ರವಿ ಮಂಜೇಗೌಡನ ಕೊಪ್ಪಲು ಆರೋಪಿಸಿದ್ದಾರೆ.
ನೀಟ್ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆಯನ್ನು ರದ್ದು ಮಾಡುವ ಮೂಲಕ ವೈದ್ಯರಾಗಬೇಕೆಂಬ ಕನಸು ಹೊತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಿದೆ ಎಂದು ಅವರು ಪ್ರಕಟಣೆಯಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಹಗರಣ ನಡೆದಿದೆ. ಕಳೆದ ನಾಲ್ಕೈದು ವರ್ಷಗಳಿಂದ ನೀಟ್ನಲ್ಲಿ ಒಂದಲ್ಲಾ ಒಂದು ಅಕ್ರಮಗಳು ನಡೆಯುತ್ತಲೇ ಇವೆ ದೂರಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ನಡೆದಿದೆ. ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಆಘಾತಗೊಂಡಿದ್ದಾರೆ. ಕೇಂದ್ರ ಸರ್ಕಾರವೆ ಇದರ ಜವಾಬ್ದಾರಿ ಹೊರಬೇಕು, ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಬೇಕು ಎಂದು ರವಿ ಮಂಚೇಗೌಡನ ಕೊಪ್ಪಲು ಆಗ್ರಹಿಸಿದ್ದಾರೆ.
ಮತ್ತೊಮ್ಮೆ ಪರೀಕ್ಷೆ ನಡೆಸುವುದರಿಂದ ಪ್ರಾಮಾಣಿಕವಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ರಾಜಸ್ಥಾನ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋಚಿಂಗ್ ಸೆಂಟರ್ಗಳು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿವೆ. ಇದರ ಹಿಂದೆ ದೊಡ್ಡ ಮಾಫಿಯಾ ಇರುವುದು ಕಂಡು ಬರುತ್ತದೆ, ಎಲ್ಲವನ್ನು ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
