ಮೈಸೂರು: ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಟ ಹೇಳತೀರದಾಗಿದ್ದು,
ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ,ಮೊದಲು ಈ ಆಸ್ಪತ್ರೆಗೆ ಮೇಜರ್ ಸರ್ಜರಿ ಆಗಬೇಕಿದೆ.
ಸರಿಯಾಗಿ ವೈದ್ಯರಿಲ್ಲದೆ ಕೇವಲ 2 ದಿನದಲ್ಲಿ ಅನೇಕ ಮಂದಿ ಸಾವಿಗೀಡಾಗಿದ್ದಾರೆ ಎಂದು ರೋಗಿಗಳ ಕಡೆಯವರು ಆರೋಪಿಸಿದ್ದಾರೆ.
ರಾತ್ರಿ ಶಿಫ್ಟ್ನಲ್ಲಿ ವೈದ್ಯರೇ ಇರಲ್ಲ ಎಂದು ಸಾರ್ವಜನಿಕರು ದೂರಿದ್ದು,ಈ ಸಂಬಂಧದ ಮೊಬೈಲ್ ವಿಡಿಯೋ ಈಗ ವೈರಲ್ ಆಗಿದೆ.
ಮೈಸೂರಿನ ಕೆ.ಆರ್.ಎಸ್ ರಸ್ತೆಯಲ್ಲಿರುವ ಪ್ರಸಿದ್ಧ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಹಾಗೂ ರೋಗಿಗಳ ಸಂಬಂಧಿಕರು ಆರೋಪಿಸಿ ಮುಖ್ಯ ಮಂತ್ರಿಗಳು,ಆರೋಗ್ಯ ಸಚಿವರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ 48 ಗಂಟೆಗಳಲ್ಲಿ ಆಸ್ಪತ್ರೆಯಲ್ಲಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, “ವೈದ್ಯರ ನಿರ್ಲಕ್ಷ್ಯ ಹಾಗೂ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸರಣಿ ಸಾವು ಸಂಭವಿಸಿದೆ” ಎಂದು ಮೃತರ ಸಂಬಂಧಿಕರು ಆಸ್ಪತ್ರೆಯ ಒಳಗಿನ ಪರಿಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಇದು ಸಂಚಲನದ ಜತೆಗೆ ಆತಂಕ ಮೂಡಿಸಿದೆ.
ಆಸ್ಪತ್ರೆಯ ತುರ್ತು ನಿಗಾ ಘಟಕ ಮತ್ತು ಸಾಮಾನ್ಯ ವಾರ್ಡ್ಗಳಲ್ಲಿ ರೋಗಿಗಳ ಸಂಬಂಧಿಕರು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ರಾತ್ರಿ ಶಿಫ್ಟ್ನಲ್ಲಿ ಇಲ್ಲಿ ಹಿರಿಯ ವೈದ್ಯರೇ ಇರುವುದಿಲ್ಲ. ಬೆಳಿಗ್ಗೆ ಶಿಫ್ಟ್ನಲ್ಲೂ ಸರಿಯಾದ ಸಮಯಕ್ಕೆ ಡಾಕರ್ ಬರುವುದಿಲ್ಲ, ತುರ್ತು ಕೇಸ್ ಗಳು ಬಂದಾಗಲೂ ನೋಡೋರು ಯಾರೂ ಇಲ್ಲ ಎಂದು ಸಾರ್ವಜನಿಕರು ವಿಡಿಯೋದಲ್ಲಿ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೃದಯಾಘಾತವಾಗಿ ಬಂದವರಿಗೆ ಗೋಲ್ಡನ್ ಅವರ್ ನಲ್ಲಿ ಚಿಕಿತ್ಸೆ ಸಿಗಬೇಕು. ಆದರೆ ಇಲ್ಲಿ ವೈದ್ಯರು ಸಿಗುವುದೇ ಕಷ್ಟ, ನರ್ಸ್ಗಳೇ ಎಲ್ಲವನ್ನೂ ನೋಡಿಕೊಳ್ಳುವಂತಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 8ರವರೆಗೆ ವಾರ್ಡ್ನಲ್ಲಿ ಯಾವುದೇ ಹಿರಿಯ ವೈದ್ಯರು ಲಭ್ಯವಿರುವುದಿಲ್ಲ, ಬೆಳಿಗ್ಗೆ ಶಿಫ್ಟ್ನ ವೈದ್ಯರು 9.30 ಅಥವಾ 10 ಗಂಟೆಯಾದರೂ ರೌಂಡ್ಸ್ಗೆ ಬರುವುದಿಲ್ಲ, ತುರ್ತು ವಿಭಾಗಕ್ಕೆ ಬರುವ ಗಂಭೀರ ರೋಗಿಗಳನ್ನು ತಕ್ಷಣವೇ ತಪಾಸಣೆ ನಡೆಸಲು ವೈದ್ಯರ ಕೊರತೆಯಿದೆ ಎಂದು ಜನ ಗಂಭೀರ ಆರೋಪ ಮಾಡಿದ್ದಾರೆ.
ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದ ಕಾರಣ 2 ದಿನಗಳಲ್ಲಿ 12ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದಾರೆ ಎಂದು ರೋಗಿಗಳ ಕಡೆಯವರೇ ದೂರಿದ್ದಾರೆ.
ಇಷ್ಟೆಲ್ಲಾ ಆರೋಪಗಳಿದ್ದರೂ ಜಯದೇವ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರು ಇದೆಲ್ಲವನ್ನೂ ಸಂಪೂರ್ಣವಾಗಿ ತಳ್ಳಿಹಾಕಿದ್ದು ಇದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ 24×7 ತುರ್ತು ಸೇವೆ ಲಭ್ಯವಿದೆ. ಪ್ರತಿ ಶಿಫ್ಟ್ನಲ್ಲೂ ಡ್ಯೂಟಿ ವೈದ್ಯರು, ಕಾರ್ಡಿಯಾಲಜಿಸ್ಟ್ ಹಾಗೂ ಪಿಜಿ ವೈದ್ಯರು ಇರುತ್ತಾರೆ. 12 ಸಾವು ಸಂಭವಿಸಿರುವುದು ನಿಜ. ಆದರೆ ಅವರೆಲ್ಲರೂ ಕೊನೆಯ ಹಂತದಲ್ಲಿ, ಅತಿ ಗಂಭೀರ ಸ್ಥಿತಿಯಲ್ಲಿ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ದಾಖಲಾದವರು ಎಂದು ವೈದ್ಯಕೀಯ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಸಂಭವಿಸುವ ಪ್ರತಿ ಸಾವಿಗೂ ಡೆತ್ ಆಡಿಟ್’ ನಡೆಯುತ್ತದೆ,
ಸಾರ್ವಜನಿಕರು ಮಾಡಿರುವ ವಿಡಿಯೋದಲ್ಲಿ ಕಂಡುಬಂದ ಘಟನೆಯ ಸಮಯದ ಡ್ಯೂಟಿ ರೋಸ್ಟರ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಒಂದು ವೇಳೆ ಯಾರಾದರೂ ಕರ್ತವ್ಯಲೋಪ ಎಸಗಿರುವುದು ಸಾಬೀತಾದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿದ್ದಾರೆ.
24 ಗಂಟೆಯೊಳಗೆ ಆಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.
ರೋಸ್ಟರ್ ಪ್ರಕಾರ ವೈದ್ಯರು ಹಾಜರಿದ್ದರೇ ಸಿಸಿಟಿವಿ ದೃಶ್ಯಾವಳಿಗಳು ಏನು ಹೇಳುತ್ತವೆ ಮತ್ತು ಮೃತರ ಕೇಸ್ ಶೀಟ್ಗಳಲ್ಲಿ ಏನಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ ಸತ್ಯಾಂಶವನ್ನು ಹೊರತರುತ್ತೇವೆ. ಒಂದು ವೇಳೆ ವೈದ್ಯರ ಕೊರತೆ ಇರುವುದು ಕಂಡುಬಂದರೆ ತಕ್ಷಣವೇ ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಮೈಸೂರಿನ ಜಯದೇವ ಆಸ್ಪತ್ರೆಯ ವಿಭಾಗದಲ್ಲಿ ಮಂಜೂರಾದ ಒಟ್ಟು 42 ವೈದ್ಯರ ಹುದ್ದೆಗಳಲ್ಲಿ ಸದ್ಯ 11 ಹುದ್ದೆಗಳು ಖಾಲಿ ಇವೆ. 350 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಗೆ ಪ್ರತಿದಿನ ಸರಾಸರಿ 800 ರಿಂದ 900 ಹೊರರೋಗಿಗಳು ಹಾಗೂ 80 ರಿಂದ 100 ತುರ್ತು ಪ್ರಕರಣಗಳು ಬರುತ್ತವೆ.
ಆಸ್ಪತ್ರೆಯಲ್ಲಿ ಕೆಲಸದ ಒತ್ತಡ ವಿಪರೀತವಾಗಿದೆ. ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಅಲ್ಲಿನ ವೈದ್ಯರೊಬ್ಬರು ಅಳಲು ತೋಡಿಕೊಂಡಿದ್ದಾರೆ.
